ಆರೋಪ ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ: ಗೋವಾ ಸಿಎಂಗೆ ಸಚಿವ ರಮೇಶ್ ಜಾರಕಿಹೊಳಿ ಸವಾಲು

Update: 2020-11-30 13:46 GMT

ಬೆಳಗಾವಿ, ನ. 30: ಕರ್ನಾಟಕ ಯಾವುದೇ ಕಾನೂನು ಬಾಹಿರ ಕೆಲಸವನ್ನು ಮಾಡಿಲ್ಲ. ಕಳಸಾ-ಬಂಡೂರಿ ನಾಲೆ ನಿರ್ಮಾಣವಾಗಿರುವ ತಡೆಗೋಡೆ ಮುಟ್ಟಿಲ್ಲ. ಸ್ಥಳ ಪರಿಶೀಲನೆಗೂ ಸಿದ್ದವಿದ್ದೇವೆ. ಒಂದು ವೇಳೆ ಗೋವಾ ಸಿಎಂ ಪ್ರಮೋದ್ ಸಾವಂತ್ ಆರೋಪ ಸಾಬೀತು ಮಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳಸಾ-ಬಂಡೂರಿ ನೀರು ಹಂಚಿಕೆ ವಿಚಾರದಲ್ಲಿ ಎರಡೂ ರಾಜ್ಯಗಳ ಸಿಎಂಗಳ ಮಾತುಕತೆ ಅಗತ್ಯವಿಲ್ಲ. ಈಗಾಗಲೇ ನ್ಯಾಯಾಧೀಕರಣ ಈ ಬಗ್ಗೆ ತೀರ್ಪು ನೀಡಿದೆ. ಕೊರೋನ ಕಾರಣದಿಂದ ಅನುಷ್ಠಾನ ಸಾಧ್ಯವಾಗಿಲ್ಲ. ಮಹದಾಯಿ ವಿಚಾರ ಗೋವಾ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

ಆಕ್ಷೇಪ: ಸಚಿವ ಸಂಪುಟ ವಿಸ್ತರಣೆ ಪದೇ ಪದೇ ಮುಂದೆ ಹೋಗುವುದು ದುರ್ದೈವದ ಸಂಗತಿಯಾಗಿದೆ. ಶೀಘ್ರದಲ್ಲೇ ಸಂಪುಟ ವಿಸ್ತರಣೆ ಆಗಬೇಕು ಎನ್ನುವುದು ನಮ್ಮ ಬೇಡಿಕೆ ಎಂದ ಅವರು, ಬಿಜೆಪಿ ರಾಷ್ಟ್ರೀಯ ಮುಖಂಡ ಬಿ.ಎಲ್. ಸಂತೋಷ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ಸಾಂಬ್ರಾ ಜಿ.ಪಂ.ಸದಸ್ಯ ಕೃಷ್ಣ ಅನಗೋಳ್ಕರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ. 43 ಕಾಂಗ್ರೆಸ್ ಜಿಪಂ ಸದಸ್ಯರ ಪೈಕಿ 22 ಜನ ಸದಸ್ಯರು ನನ್ನ ಜತೆಗೆ ಇದ್ದಾರೆ. ಎಷ್ಟು ಜನ ರಾಜೀನಾಮೆ ಕೊಡುತ್ತಾರೆ ಗೊತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಇದೇ ವೇಳೆ ತಿಳಿಸಿದರು

ಬೆಳಗಾವಿ ಜಿಲ್ಲೆ ವಿಭಜನೆಯಾಗಿ ಗೋಕಾಕ್ ಚಿಕ್ಕೋಡಿ ತಾಲೂಕು ರಚನೆ ಆಗಬೇಕು ಎನ್ನುವುದು ನಮ್ಮ ಬೇಡಿಕೆಯೂ ಇದೆ. ಆದರೆ, ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿದೆ. ಹೀಗಾಗಿ ಬೆಳಗಾವಿ ಜಿಲ್ಲೆ ವಿಭಜನೆಗೆ ಅಡ್ಡಿಯಾಗಿದೆ ಎಂದು ಅವರು ಸ್ಪಷ್ಟನೆ ನೀಡಿದರು.

'ಸೋತವರಿಗೆ ಸಚಿವ ಸ್ಥಾನ ನೀಡಬೇಕೆಂದು ನಾನು ಲಾಬಿ ಮಾಡಿಲ್ಲ. ಆದರೆ, ತ್ಯಾಗ ಮಾಡಿದ 17 ಮಂದಿ ಸಹಿತ ಸಿ.ಪಿ.ಯೋಗೇಶ್ವರ್ ಅವರಿಗೂ ಸಚಿವ ಸ್ಥಾನ ನೀಡಬೇಕು. ನನ್ನನ್ನು ಬಿಟ್ಟು ಯಾರೂ ಸಭೆ ನಡೆಸಿಲ್ಲ. ನನ್ನ ಹಾಗೂ ಬಿಜೆಪಿ ರಾಷ್ಟ್ರೀಯ ಮುಖಂಡ ಬಿ.ಎಲ್. ಸಂತೋಷ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ'

-ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News