ಬಿಜೆಪಿ ಶಾಸಕ ಸಿದ್ದು ಸವದಿ ಎಳೆದಾಡಿದ್ದ ತನ್ನದೇ ಪಕ್ಷದ ಮಹಿಳಾ ಸದಸ್ಯೆಗೆ ಗರ್ಭಪಾತ !

Update: 2020-11-30 15:52 GMT

ಬಾಗಲಕೋಟೆ, ನ.30: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪುರಸಭೆ ಕಚೇರಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮತದಾನ ಮಾಡಲು ಬಂದ ಸಂದರ್ಭ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಎಳೆದಾಡಿದ್ದ ತಮ್ಮದೇ ಪಕ್ಷದ ಸದಸ್ಯೆಯಾದ ಚಾಂದಿನಿ ನಾಯಕ್ ಅವರಿಗೆ ಇದೀಗ ಗರ್ಭಪಾತವಾಗಿದೆ.

ಏನಿದು ಪ್ರಕರಣ?: ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮತದಾನ ಮಾಡಲು ಬಂದ ಸಂದರ್ಭ ತಮ್ಮದೇ ಪಕ್ಷದ ಸದಸ್ಯೆಯನ್ನು ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಅಡ್ಡಗಟ್ಟಿ ಎಳೆದಾಡಿ ಅಸಭ್ಯವಾಗಿ ವರ್ತಿಸಿದ್ದರು.

ಶಾಸಕ ಸಿದ್ದು ಸವದಿ ಪ್ರತಿನಿಧಿಸುವ ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ನ.9ರಂದು ಚುನಾವಣೆ ನಡೆದಿತ್ತು. 23 ಸದಸ್ಯ ಬಲದ ಪುರಸಭೆಗೆ 13 ಬಿಜೆಪಿ ಹಾಗೂ 10 ಮಂದಿ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ ಬಹುಮತ ಇದ್ದರೂ ಬಿಜೆಪಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಅಭ್ಯರ್ಥಿಗಳ ವಿಚಾರದಲ್ಲಿ ಅಸಮಾಧಾನವಿತ್ತು. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ ತಮ್ಮ ಪಕ್ಷದ ಮೂವರು ಸದಸ್ಯರು ಅಡ್ಡಮತದಾನ ಮಾಡಬಹುದು ಎಂಬ ಅನುಮಾನದಿಂದ ಅವರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ತಡೆಯುವ ಪ್ರಯತ್ನ ಮಾಡಿದರು.

ಈ ವೇಳೆ ಮತದಾನ ಮಾಡಲು ಹೊರಟ ವಾರ್ಡ್ ನಂ 4ರ ಸದಸ್ಯೆಯನ್ನು ಪುರಸಭೆ ಕಚೇರಿ ಎದುರು ನೆರೆದಿದ್ದ ಬಿಜೆಪಿ ಬೆಂಬಲಿಗರು ತಡೆಯಲು ಮುಂದಾಗಿದ್ದಾರೆ. ಅಲ್ಲದೇ ಅವರನ್ನು ಅಡ್ಡಗಟ್ಟಿ ವಾಪಸ್ ಹೋಗುವಂತೆ ತಳ್ಳಾಡಿದ್ದರು. ನಂತರ ಶಾಸಕ ಸಿದ್ದು ಸವದಿ ಸದಸ್ಯೆಯನ್ನು ತಡೆಯುತ್ತಾರೆ. ಆಗ ತಳ್ಳಾಟ ನಡೆದು ಚಾಂದಿನಿ ಮೆಟ್ಟಿಲಿನಿಂದ ಉರುಳಿ ಬಿದ್ದಿದ್ದರು. ಘಟನೆಯ ವಿಡಿಯೋ ವೈರಲ್ ಆಗಿತ್ತು. 

ತಳ್ಳಾಟ ನೂಕಾಟದಲ್ಲಿ ಶಾಸಕ ಸಿದ್ದು ಸವದಿ ತನ್ನನ್ನು ಮೆಟ್ಟಿಲಿನಿಂದ ಕೆಳಗೆ ತಳ್ಳಿದ್ದರು ಎಂದು ಚಾಂದಿನಿ ನಾಯಕ್ ಆರೋಪಿಸಿದ್ದಾರೆ. ಜೊತೆಗೆ, ಚಾಂದಿನಿ ಕೆಳಗೆ ಬೀಳುತ್ತಿದ್ದಂತೆ ಆಕೆಯನ್ನು ಇತರೆ ಕಾರ್ಯಕರ್ತರು ಎಳೆದಾಡಿದ್ದರು ಎಂದು ಆರೋಪಿಸಿದ್ದಾರೆ.

3 ತಿಂಗಳ ಗರ್ಭಿಣಿಯಾಗಿದ್ದ ಚಾಂದಿನಿ ಶಾಸಕರು ದೂಡಿದ್ದರಿಂದ ಕೆಳಗೆ ಬಿದ್ದರು. ಘಟನೆಯಲ್ಲಿ ಆಕೆಯ ಹೊಟ್ಟೆಗೆ ಏಟು ಬಿದ್ದ ಪರಿಣಾಮ ಮಗುವಿನ ಬೆಳವಣಿಗೆ ಕುಂಠಿತವಾಯ್ತು. ಈ ಹಿನ್ನೆಲೆಯಲ್ಲಿ ಚಾಂದಿನಿ ಮಹಾಲಿಂಗಪುರ ಸರಕಾರಿ ಆಸ್ಪತ್ರೆಯಲ್ಲಿ ಅಬಾರ್ಷನ್ ಮಾಡಿಸಿಕೊಳ್ಳಬೇಕಾಯಿತು ಎಂದು ಸದಸ್ಯೆ ಪತಿ ನಾಗೇಶ್ ನಾಯಕ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಶಾಸಕ ಸಿದ್ದು ಸವದಿ ಅವರ ಕ್ಷೇತ್ರದಲ್ಲಿ ಹೆಣ್ಣು ಮಗಳೊಬ್ಬಳ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಥವಾ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಅಲ್ಲಿಗೇ ಭೇಟಿ ಕೊಟ್ಟು ಆ ಹೆಣ್ಣಿನ ಪರವಾಗಿ ನಿಲ್ಲುತ್ತೇವೆ. ಮಹಿಳೆ ಮೇಲೆ ದೌರ್ಜನ್ಯ ನಡೆಸಿದವರನ್ನು ತಕ್ಷಣ ಬಂಧಿಸಬೇಕು.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಬಾಗಲಕೋಟೆ ಜಿಲ್ಲೆ ತೇರದಾಳ ಪುರಸಭೆ ಚುನಾವಣೆಯ ವೇಳೆ ಅಲ್ಲಿನ ಬಿಜೆಪಿ ಸದಸ್ಯೆಗೆ ಮಾನಸಿಕ ಹಿಂಸೆ ಹಾಗೂ ದೈಹಿಕ ಹಿಂಸೆಯ ಪರಿಣಾಮ ಅವರಿಗೆ ಗರ್ಭಪಾತವಾಗಿದೆ. ಇದು ಕೊಲೆಗೆ ಸಮಾನ. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದ್ದ ಸರಕಾರಕ್ಕೆ ಕಣ್ಣು, ಕಿವಿ, ಬಾಯಿ ಇದ್ದಂತಿಲ್ಲ. ಅಪರಾಧಿಗಳನ್ನು ರಕ್ಷಣೆ ಮಾಡಲಾಗುತ್ತಿದೆ. ಇಂತಹ ನೀಚರನ್ನು ಸರಕಾರ ಹೊರಗಿಡಬೇಕು. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಎಲ್ಲಿದ್ದಾರೆ?

-ಉಮಾಶ್ರೀ, ಮಾಜಿ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News