ಚುನಾವಣಾ ಪ್ರಚಾರಕ್ಕೆ ಹೋಗುವ ಅಮಿತ್ ಶಾಗೆ ರೈತರ ಭೇಟಿಗೆ ಸಮಯವಿಲ್ಲ: ಸಿದ್ದರಾಮಯ್ಯ ಕಿಡಿ

Update: 2020-11-30 16:09 GMT

ಬೆಂಗಳೂರು, ನ.30: ಪ್ರತಿಭಟನಾ ನಿರತ ರೈತರೊಂದಿಗೆ ಶರತ್ತುಬದ್ಧ ಮಾತುಕತೆ ನಡೆಸುವ ಕುರಿತು ಮುಂದಿಟ್ಟಿದ್ದ ಪ್ರಸ್ತಾವವನ್ನು ರೈತರು ತಿರಸ್ಕರಿಸಿದ್ದಾರೆ. ಕೇಂದ್ರದ ಬಿಜೆಪಿ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿಯಾದ ಎಲ್ಲ ಕಾನೂನುಗಳನ್ನು ರದ್ದುಗೊಳಿಸಬೇಕೆಂಬುದೆ ಅವರ ಸ್ಪಷ್ಟ ಆಗ್ರಹವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ನಾಯಕರು ರೈತರನ್ನು ಹಣಕ್ಕಾಗಿ ಪ್ರತಿಭಟಿಸುವ ಏಜೆಂಟ್‍ಗಳು ಎಂದು ಕರೆಯುವ ಮೂಲಕ ಅವಮಾನ ಮಾಡಿದ್ದಾರೆ. ರೈತರು ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಆದರೆ, ಬಿಜೆಪಿಯವರಿಗೆ ರೈತರ ಬೇಡಿಕೆಗಳು ಆದ್ಯತೆಯಾಗಿಲ್ಲ. ಬಿಜೆಪಿ ನಾಯಕರು ಕ್ರೋನಿ ಕ್ಯಾಪಿಟಲಿಸ್ಟ್ ಗಳಾಗಿ ವರ್ತಿಸುತ್ತಿದ್ದಾರೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲು, ಕೋಮುಭಾವನೆಗಳನ್ನು ಕೆರಳಿಸಲು ಸಮಯವಿದೆ. ಆದರೆ, ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಲು ಮಾತ್ರ ಸಮಯವಿಲ್ಲ. ರೈತರ ಮೇಲೆ ಅಶ್ರುವಾಯು, ಜಲಫಿರಂಗಿ ಬಳಕೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಂದಕ ನಿರ್ಮಾಣ ಹಾಗೂ ರೈತರನ್ನು ಬಂಧಿಸುವುದು ಅಮಿತ್ ಶಾ ನಿರ್ಧಾರವಾಗಿದೆ. ಈ ಕೂಡಲೆ ಅಮಿತ್ ಶಾ ರೈತರ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಲಾಲ್ ಬಹದ್ದೂರ್ ಶಾಸ್ತ್ರಿ ‘ಜೈ ಜವಾನ್, ಜೈ ಕಿಸಾನ್’ ಎಂದು ಘೋಷಿಸಿದರು. ಆದರೆ, ರೈತರು ಹಾಗೂ ಸೈನಿಕರನ್ನು ಪರಸ್ಪರ ಎದುರುಬದರಾಗಿ ನಿಲ್ಲಿಸಿದ ಏಕೈಕ ಪಕ್ಷ ಬಿಜೆಪಿ. ರೈತರು ಕ್ರಿಮಿನಲ್ ಅಥವಾ ಭಯೋತ್ಪಾದಕರಲ್ಲ. ಅವರು ನಮ್ಮ ರಕ್ಷಕರು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಬ್ಬರು ರೈತರನ್ನು ಗೋಲಿಬಾರ್ ಮೂಲಕ ಹತ್ಯೆ ಮಾಡಿದರು. ಈಗ ಅಮಿತ್ ಶಾ ಅದನ್ನೆ ಅನುಸರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ರೈತರೊಂದಿಗೆ ಶರತ್ತು ರಹಿತವಾಗಿ ಮಾತುಕತೆ ನಡೆಸಬೇಕು ಎಂಬುದು ನನ್ನ ಒತ್ತಾಯ. ಕಾಂಗ್ರೆಸ್ ಪಕ್ಷ ರೈತರೊಂದಿಗೆ ಸದಾ ಕಾಲ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.

ಎಂಎಸ್‍ಪಿಗೆ ಕಾನೂನು ಮಾನ್ಯತೆ, ರೈತ ವಿರೋಧಿಯಾದ ಎಲ್ಲ ಕಾನೂನುಗಳ ರದ್ಧತಿ, ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು, ಎಪಿಎಂಸಿ ಜಾಲವನ್ನು ವಿಸ್ತರಣೆ ಮಾಡಬೇಕು ಹಾಗೂ ರೈತರ ಸ್ವಸಹಾಯ ಸಂಘಗಳು ಹಾಗೂ ಸಾಲದ ಪ್ರಮಾಣವನ್ನು ಬಲವರ್ಧನೆಗೊಳಿಸಬೇಕೆಂದು ರೈತರು ಮುಂದಿಟ್ಟಿರುವ ಬೇಡಿಕೆಗಳ ಪರವಾಗಿ ನಾವು ಕೈ ಜೋಡಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News