ಮಠಾಧೀಶರಿಗೆ ರಾಜಕೀಯ ಮಾಡುವ ಆಸಕ್ತಿ ಇದ್ದರೆ ವಿಧಾನಸೌಧಕ್ಕೆ ಬರಲಿ ಎಂದ ಜೆಡಿಎಸ್ ನಾಯಕ

Update: 2020-11-30 14:36 GMT

ಕಾರವಾರ, ನ.30: ಮಠಾಧೀಶರಿಗೆ ರಾಜಕೀಯ ಮಾಡುವ ಆಸಕ್ತಿ ಇದ್ದರೆ ನಮ್ಮ ಜೊತೆಗೆ ವಿಧಾನಸೌಧಕ್ಕೆ ಬರಲಿ ಎಂದು ಮಠಾಧೀಶರ ವಿರುದ್ಧ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಕಿಡಿಕಾರಿದ್ದಾರೆ.

ಕಾರವಾರಕ್ಕೆ ಸೋಮವಾರ ಭೇಟಿ ನೀಡಿದ ಅವರು 'ಸಮುದಾಯದ ಅಭಿವೃದ್ಧಿಗೆ ರಾಜಕಾರಣಿಗಳಿದ್ದಾರೆ. ಸ್ವಾಮೀಜಿಗಳು ಅವರ ಮಠದಲ್ಲಿದ್ದು ಸಮಾಜವು ಶಾಂತವಾಗಿ ಇರುವುದಂತೆ ನೋಡಿಕೊಳ್ಳಲಿ. ಅದನ್ನು ಬಿಟ್ಟು ರಾಜಕೀಯದ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದು ಸರಿಯಲ್ಲ ಎಂದರು. ಬಸವ ಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳು ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ತಿಳಿಸಿದರು. 

ಸರ್ಕಾರ ವಿದ್ಯಾಗಮ ಮಾಡಿದೆ. ಆದರೆ, ಅದು ಯಾರಿಗೂ ಪ್ರಯೋಜನವಾಗಿಲ್ಲ. ಸರ್ಕಾರಕ್ಕೆ ಸಲಹೆ ಕೊಟ್ಟಲ್ಲಿ ತೆಗೆದುಕೊಳ್ಳುತ್ತಿಲ್ಲ. ನನಗೆ ಆರು ದಿನ ಅವಕಾಶ ನೀಡಿದರೆ ನಾನು ಇಡೀ ಶಿಕ್ಷಣ ವ್ಯವಸ್ಥೆ ಬದಲಿಸಿ ತೋರಿಸುತ್ತೇನೆ. ಮಾಡದೇ ಇದ್ದರೆ ನನ್ನ ಹೆಸರನ್ನು ಹೇಳಬೇಡಿ ಎಂದು ಸವಾಲು ಹಾಕಿದರು. 

ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಅಂದಮೇಲೆ ಸಿಎಂ ಬದಲಾವಣೆ ವಿಚಾರ ಬರುವುದು ಮಾಮೂಲಿ. ಆದರೆ ಬಿಜೆಪಿ ಆಂತರಿಕ ಕಲಹದಿಂದ ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಸರ್ಕಾರಕ್ಕೆ ಜನ ಸೇವೆ ಮಾಡುವ ಮನಸಿದ್ದಲ್ಲಿ ವಿರೋಧ ಸ್ಥಾನದಲ್ಲಿದ್ದೇ ಉತ್ತಮ ಕೆಲಸ ಮಾಡಬಹುದಿತ್ತು ಎಂದರು.

ಒಂದರಿಂದ ಎಂಟರವರೆಗಿನ ಮಕ್ಕಳಿಗೆ ಮೊದಲಿನಿಂದಲೂ ಕ್ಲಾಸ್ ಬೇಡ ಎಂದು ಹೇಳುತ್ತಿದ್ದೆ. ಉಳಿದಂತೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ 10 ಮಕ್ಕಳಂತೆ ವಿಂಗಡಿಸಿ ಪ್ರತ್ಯೇಕವಾಗಿ ತರಗತಿ ತೆಗೆದುಕೊಳ್ಳುವಂತೆ ಪತ್ರ ಬರೆದು ಸರ್ಕಾರಕ್ಕೆ ಸಲಹೆ ನೀಡಿದ್ದೆ. ಅಲ್ಲದೆ ಕೋವಿಡ್ ವೇಳೆ ರಿಕ್ಷಾ ಚಾಲಕರು, ಕಾರ್ಮಿಕರಿಗೆ ಪ್ಯಾಕೇಜ್ ನೀಡಿದಂತೆ ಶಿಕ್ಷಕರಿಗೂ ನೀಡುವಂತೆ ತಿಳಿಸಿದ್ದೆ. ಆದರೆ, ಸರ್ಕಾರ ನಮ್ಮಂತ ಅನುಭವಸ್ಥರು ನೀಡುವ ಸಲಹೆಯನ್ನು ಕಿವಿಗೂ ಹಾಕಿಕೊಳ್ಳುತ್ತಿಲ್ಲ ಎಂದು ದೂರಿದರು.

ಸರ್ಕಾರವು ಪ್ರಚಾರಕ್ಕಾಗಿ ಖಾಸಗಿ ಶಾಲೆಗಳಿಗೆ ಯಾರೂ ಶುಲ್ಕ ನೀಡಬೇಡಿ ಎಂದು ಹೇಳುತ್ತಿದೆ. ತಂದೆ-ತಾಯಿ ಇಬ್ಬರು ಸರ್ಕಾರಿ ವ್ಯವಸ್ಥೆಯಲ್ಲಿರುವವರು ಪೀಸ್ ಬೇಡ ಅಂದರೆ ಅದೇ ಪೀಸ್ ಹಣ ಪಡೆದು ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರು ಏನು ಮಾಡಬೇಕು. ಅದೆಷ್ಟೋ ಖಾಸಗಿ ಶಾಲೆ ಶಿಕ್ಷಕರು ಇಂದು ಔಷಧಿ ಪಡೆಯಲು ಹಣ ಇಲ್ಲದ ಸ್ಥಿತಿಗೆ ತಲುಪಿದ್ದಾರೆ. ಈ ಕಾರಣದಿಂದ ಪ್ರತಿಭಟನೆಗೆ ಮುಂದಾಗಿರುವ ಖಾಸಗಿ ಶಾಲೆ ಶಿಕ್ಷಕರ ನಡೆಯನ್ನು ಬೆಂಬಲಿಸುವುದಾಗಿ ಅವರು ಹೇಳಿದರು. 

ಸರಕಾರದಲ್ಲಿ ಆಡಳಿತವೇ ನಡೆದಿಲ್ಲ. ಬರೀ ಮಂತ್ರಿ ತೆಗೆಯುವುದು, ಸೇರಿಸುವುದರಲ್ಲಿಯೇ ಇದ್ದಾರೆ. ಸದ್ಯ ಯಡಿಯೂರಪ್ಪನವರನ್ನು ಸಮಾಧಾನ ಮಾಡಿಕೊಂಡು ಹೋದರೆ ಮಾತ್ರ ಸರ್ಕಾರ ಉಳಿಯುತ್ತೆ. ಇಲ್ಲವಾದರೆ ಲಿಂಗಾಯುತ ಸಮುದಾಯದವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News