ಮಾಲಕನಿಂದ ತಪ್ಪಿಸಿಕೊಂಡ ನಾಯಿಗೆ ಪೊಲೀಸ್ ಠಾಣೆಯಲ್ಲಿ ಆತಿಥ್ಯ

Update: 2020-11-30 15:05 GMT

ಶಿವಮೊಗ್ಗ: ಮನೆ ಮಾಲಕನಿಂದ ತಪ್ಪಿಸಿಕೊಂಡ ನಾಯಿಯೊಂದು ಈಗ ಪೊಲೀಸರ ವಶದಲ್ಲಿದ್ದು, ಪೊಲೀಸರೇ  ನಾಯಿಯನ್ನು ಆರೈಕೆ ಮಾಡುತ್ತಿದ್ದಾರೆ.

ಶಿವಮೊಗ್ಗದ ಗಾಡಿಕೊಪ್ಪದಲ್ಲಿ  ಲ್ಯಾಬ್ರಡಾರ್ ಜಾತಿಗೆ ಸೇರಿದ ನಾಯಿಯೊಂದು  ಮೀನು ವ್ಯಾಪಾರಿಯೊಬ್ಬರಿಗೆ ದೊರೆತಿದೆ. ದಷ್ಟಪುಷ್ಟವಾಗಿದ್ದ ಲ್ಯಾಬ್ರಡಾರ್ ನಾಯಿ ಸಾಕು ನಾಯಿ ಎಂಬುದನ್ನು ಅರಿತ ಮೀನು ವ್ಯಾಪಾರಿ, ನಾಯಿಯನ್ನು ಕರೆದುಕೊಂಡು ತನ್ನ ಮನೆಗೆ ಬಂದಿದ್ದಾರೆ. ನಾಯಿಯ ಮಾಲಕರು ಬರಬಹುದೇನೋ ಎಂದು ಕಾದಿದ್ದಾರೆ. ಆದರೆ ನಾಯಿಯ ಮಾಲಕರು ಬರಲೇ ಇಲ್ಲ.

ಮಾಲಕನ ಸುಳಿವೇ ಇಲ್ಲ ಎಂದು ಅರಿತ  ನಾಯಿ ಕೂಗಾಲಾರಂಭಿಸಿದ್ದು,  ಏನು ಮಾಡಬೇಕೆಂದು ದಿಕ್ಕುತೋಚದ ಮೀನು ವ್ಯಾಪಾರಿ ತುಂಗಾ ನಗರ ಪಿಎಸ್ ಐ ತಿರುಮಲೇಶ್ ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ತಿರುಮಲೇಶ್ ನಾಯಿಯನ್ನು ಪೊಲೀಸ್ ಠಾಣೆಗೆ ಕರೆತಂದು ಅದಕ್ಕೆ ಆಹಾರದ ವ್ಯವಸ್ಥೆ ಮಾಡಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲೇ ವಾಸ್ತವ್ಯ ಹೂಡಿರುವ ನಾಯಿ ಪೊಲೀಸರ ಆರೈಕೆಯಲ್ಲಿ ಕಾಲಕಳೆಯುತ್ತಿದೆ.

ವಾರ್ತಾಭಾರತಿ ಪತ್ರಿಕೆಯೊಂದಿಗೆ ಮಾತನಾಡಿದ ಪಿಎಸ್ಐ ತಿರುಮಲೇಶ್, ಇನ್ನೊಂದು ದಿನ ನಾಯಿಯ ಮಾಲಕರಿಗೆ ಕಾಯುತ್ತೇವೆ. ಒಂದು ವೇಳೆ ಯಾರೂ ಬಾರದೇ ಇದ್ದಲ್ಲಿ ನಾಯಿ ಸಾಕಲು ಮುಂದೆ‌ ಬರುವವರಿಗೆ ಅಥವಾ ಡಾಗ್ ಕೇರ್ ಸೆಂಟರ್ ಗೆ ನಾಯಿಯನ್ನು ಕಳುಹಿಸುವುದಾಗಿ  ತಿರುಮಲೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News