ದಿಲ್ಲಿಯಲ್ಲಿ ಪ್ರತಿಭಟನೆ: ರೈತರ ಜತೆ ಚರ್ಚಿಸಲು ಕೇಂದ್ರ ಸರಕಾರಕ್ಕೆ ಕುಮಾರಸ್ವಾಮಿ ಮನವಿ

Update: 2020-11-30 16:27 GMT

ಬೆಂಗಳೂರು, ನ. 30: 'ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಹೋರಾಟ 5ನೆ ದಿನ ತಲುಪಿದೆ. ರೈತರ ಹಿತಕ್ಕಾಗಿ ಕಾಯ್ದೆ ತಂದಿರುವುದಾಗಿ ಹೇಳಿರುವ ಕೇಂದ್ರ ಕೂಡಲೇ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಅವರ ಅನುಮಾನಗಳನ್ನು ನಿವಾರಿಸುವ ಪ್ರಯತ್ನ ಮಾಡುವುದು ಸೂಕ್ತ. ಇಲ್ಲವಾದರೆ, ರೈತರು, ಜನರ ಅನುಮಾನಗಳು ಬೆಳೆಯುತ್ತಾ ಹೋಗುತ್ತದೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, 'ರೈತರ ಸಮಸ್ಯೆ ಆಲಿಸಬೇಕಿದ್ದರೆ ಬುರಾಡಿ ಉದ್ಯಾನಕ್ಕೆ ಬರಬೇಕು ಎಂದು ಕೇಂದ್ರ ರೈತರಲ್ಲಿ ಮನವಿ ಮಾಡಿದೆ. ಇದನ್ನು ರೈತರು ಒಪ್ಪಿಲ್ಲ. ಇದು ತಮಗೆ ಒಡ್ಡಿರುವ ಷರತ್ತು ಎಂದು ರೈತರು ಭಾವಿಸಿದ್ದಾರೆ. ಆದುದರಿಂದ ಈ ಷರತ್ತು ಹಿಂದಕ್ಕೆ ಪಡೆಯುವುದೇ ಸೂಕ್ತ. ರೈತರು ಇರುವಲ್ಲಿಯೇ, ಅವರು ಇಚ್ಛಿಸಿದಲ್ಲಿಯೇ ಸಮಸ್ಯೆಗಳನ್ನು ಆಲಿಸಿ ಎಂಬುದು ನನ್ನ ಸಲಹೆ' ಎಂದು ತಿಳಿಸಿದ್ದಾರೆ.

'5 ದಿನಗಳಿಂದ ರೈತರು ಸಿಂಗು ಗಡಿಯಲ್ಲೇ ಧರಣಿ ಕುಳಿತಿದ್ದಾರೆ. ಇದು ಚಳಿಗಾಲ. ದಿಲ್ಲಿ ಚಳಿ ಯಾರಿಗಾದರೂ ಮೈ ನಡುಗಿಸುತ್ತದೆ. ಕೋವಿಡ್-19 ಕಾಲದಲ್ಲಿ ರೈತರನ್ನು ಹಾಗೆ ಅಲ್ಲಿ ಬಿಡುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ. ಅಲ್ಲಿರುವ ಯಾರಿಗಾದರೂ ಅಪಾಯವಾದರೆ ಅದು ಕೇಂದ್ರ ಸರಕಾರದ ಜವಾಬ್ದಾರಿಯಾಗುತ್ತದೆ. ಹೀಗಾಗಿ ಕೂಡಲೇ ಮನವಿ ಆಲಿಸುವುದು ಸಮಂಜಸ' ಎಂದು ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News