ಕಾಶ್ಮೀರ, ರಾಮಮಂದಿರ ಮಾದರಿಯಲ್ಲೇ ದತ್ತಪೀಠ ವಿವಾದ ಬಗೆಹರಿಯಲಿದೆ: ಸಿ.ಟಿ.ರವಿ

Update: 2020-11-30 16:38 GMT


ಚಿಕ್ಕಮಗಳೂರು, ನ.30: ಕಾಶ್ಮೀರ ವಿಚಾರ ಹಾಗೂ ರಾಮಮಂದಿರ ನಿರ್ಮಾಣಕ್ಕಿದ್ದ ಎಲ್ಲ ಅಡೆತಡೆಗಳನ್ನು ಮೋದಿ ನೇತೃತ್ವದ ಕೇಂದ್ರ ಸರಕಾರ ಸರಾಗವಾಗಿ ನಿವಾರಣೆ ಮಾಡಿದೆ. ಅದದಂತೆಯೇ ಗುರು ದತ್ತಾತ್ರೇಯ ಬಾಬಾ ಬುಡನ್ ಗಿರಿ ವಿವಾದವನ್ನು ನಿವಾರಿಸಲು ಬಿಜೆಪಿ ಸರಕಾರ ಬದ್ಧವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮಸೇನೆ ಮತ್ತು ನಮ್ಮ ಹೋರಾಟ ಏಕಮುಖವಾಗಿದೆ. ಆದರೆ ಸೇನೆಯ ಮುಖಂಡರು ನನ್ನನ್ನು ಟೀಕಿಸಿ ದುರ್ಬಲಗೊಳಿಸುವುದರಿಂದ ದತ್ತಪೀಠ ವಿರೋಧಿಗಳಿಗೆ ಅವಕಾಶ ಸಿಗುತ್ತದೆ. ಶ್ರೀರಾಮಸೇನೆಯವರಿಗೆ ಪೀಠದ ವಿರೋಧಿಗಳು ಬೇಕಾ? ದತ್ತಪೀಠ ಪರ ಹೋರಾಟ ಮಾಡುವರು ಬೇಕಾ? ಎಂದು ಅವರೇ ತೀರ್ಮಾನ ಮಾಡಬೇಕು. ಸತತ ಪ್ರಯತ್ನದಿಂದ ಅಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಅಭಿವೃದ್ಧಿ ಕೆಲಸಗಳಾಗಿವೆ. ನ್ಯಾಯಾಲಯದಲ್ಲಿ ನಿರಂತರ ಹೋರಾಟ ಮಾಡಲಾಗುತ್ತಿದೆ ಎಂದರು.

ಕಾಶ್ಮೀರ ವಿಚಾರ ಏನಾಯ್ತು? ರಾಮಮಂದಿರ ವಿಚಾರ ಏನಾಯ್ತು? ಎಂದು ಎಲ್ಲರೂ ಕೇಳುತ್ತಿದ್ದರು. ಆದರೆ ಕೇಂದ್ರದ ಬಿಜೆಪಿ ಸರಕಾರ ಅವುಗಳಿಗಿದ್ದ ಅಡೆತಡೆಗಳನ್ನು ನಿವಾರಣೆ ಮಾಡಿದೆ. ಅದೇ ರೀತಿ ದತ್ತಪೀಠಕ್ಕಿರುವ ಅಡೆತಡೆಗಳನ್ನು ಶೀಘ್ರ ನಿವಾರಿಸುತ್ತೇವೆ. ಈ ವಿಚಾರವಾಗಿ ನಾವು ಏಕ ಪಕ್ಷೀಯವಾಗಿ ಕ್ರಮಕೈಗೊಂಡರೆ ಇನ್ನೂ 50 ವರ್ಷ ಕೋರ್ಟ್ ನಲ್ಲೇ ವಿವಾದ ಇರುತ್ತದೆ. ನ್ಯಾಯಾಲಯಕ್ಕೆ ವಾಸ್ತವಾಂಶಗಳನ್ನು ಮನವರಿಕೆ ಮಾಡಿ ಅದರ ಆಧಾರದಲ್ಲಿ ನ್ಯಾಯ ಪಡೆಯಲು ಸತತ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ದತ್ತಪೀಠ ಮುಕ್ತಿಗೆ ದತ್ತಪೀಠ ಸಂವರ್ಧನ ಸಮಿತಿ ವಕೀಲರನ್ನು ನೇಮಿಸಿದೆ. ಶ್ರೀರಾಮ ಸೇನೆಯವರೂ ಉತ್ತಮ ವಕೀಲರನ್ನು ನೇಮಿಸಿ ನ್ಯಾಯಾಲಯದಲ್ಲಿ ಹೋರಾಟ ಮಾಡಲಿ, ಅವರು ನನ್ನ ವಿರುದ್ಧ ಹೋರಾಟ ಮಾಡುವುದರಿಂದ ದತ್ತಪೀಠ ವಿರೋಧಿಗಳಿಗೆ ಲಾಭ ಮಾಡಿಕೊಟ್ಟಂತಾಗುತ್ತದೆ ಎಂದು ಸಿ.ಟಿ.ರವಿ ದತ್ತಮಾಲಾ ಅಭಿಯಾನದ ಸಂದರ್ಭ ಶ್ರೀರಾಮಸೇನೆಯ ಮುಖಂಡರು ಮಾಡಿದ್ದ ಟೀಕೆಗೆ ತಿರುಗೇಟು ನೀಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ದತ್ತಪೀಠದ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ಅಫಿಡವಿಟಡ್ ಸಲ್ಲಿಸಿದಾಗ ಮಾಜಿ ಸಿಎಂ ಸಿದ್ದರಾಮಯ್ಯ ಸರಕಾರದ ನಿರ್ಣಯದ ವಿರುದ್ಧ ಶ್ರೀರಾಮಸೇನೆ ಏಕೆ ಹೋರಾಟ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ನಾವು ದತ್ತಪೀಠ ವಿರುದ್ಧವಲ್ಲ, ದತ್ತಪೀಠದ ಪರ ಇದ್ದೇವೆ. ನಿರಂತರವಾಗಿ ಹೋರಾಟ ಮಾಡಿದ್ದೇವೆ. ಶ್ರೀರಾಮಸೇನೆ ನ್ಯಾಯಾಲಯದಲ್ಲಿ ಉತ್ತಮ ವಕೀಲರನ್ನು ನೇಮಿಸಲಿ. ಹೊರಗಡೆ ಮಾಡುವ ವಾದವನ್ನು ತಮ್ಮ ವಕೀಲರ ಮೂಲಕ ಮಂಡಿಸಲಿ. ನಾವು ಯಾರಿಂದಲೂ ಹೇಳಿಸಿಕೊಂಡು ದತ್ತಪೀಠದ ಪರ ಹೋರಾಟ ಮಾಡುವ ಅಗತ್ಯವಿಲ್ಲ, ನಮಗೂ ಬದ್ಧತೆ ಇದೆ ಎಂದು ರವಿ ಹೇಳಿದರು.

ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಂಘಟನೆ ಉತ್ತಮವಾಗಿದೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ಅವರು ಜನನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಪಕ್ಷದ ದಲಿತ ಮುಖಂಡ ಡಾ.ಎಲ್.ಮುರುಗನ್ ರಾಜ್ಯಘಟಕದ ಅಧ್ಯಕ್ಷರಾಗಿದ್ದು, ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷವನ್ನು ಸದೃಢವಾಗಿ ಸಂಘಟಿಸಲಾಗುತ್ತಿದೆ ಎಂದ ಅವರು, ಡಿಎಂಕೆ ಮುಖಂಡರೊರ್ವರು ಸುಬ್ರಮಣ್ಯಸ್ವಾಮಿ ಯಾತ್ರೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದನ್ನು ಖಂಡಿಸಿ ವೆಟ್ರಿವೆಲ್ ಯಾತ್ರೆ ನಡೆಯುತ್ತಿದೆ. ಇದಕ್ಕೆ ದೊಡ್ಡ ಪ್ರಮಾಣದ ಜನ ಬೆಂಬಲ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿ ವ್ಯಕ್ತಿಪೂಜೆ ದೂರಾಗಿ ರಾಷ್ಟ್ರವಾದದ ಮನೋಭಾವನೆ ಹೊಸ ಟ್ರೆಂಡ್ ಆಗಲಿದೆ. ಬೇರೆ ಬೇರೆ ಪಕ್ಷದ ಮುಖಂಡರು ಬಿಜೆಪಿ ಪಕ್ಷ ಸೇರುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News