ಮಂಡ್ಯ: ರೈತರ ಮೇಲಿನ ದೌರ್ಜನ್ಯ, ಮೈಷುಗರ್ ಖಾಸಗೀಕರಣ ಖಂಡಿಸಿ ರಸ್ತೆ ತಡೆ

Update: 2020-11-30 16:39 GMT

ಮಂಡ್ಯ, ನ.30: ಕೇಂದ್ರ ಸರಕಾರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಮೇಲಿನ ದೌರ್ಜನ್ಯ ಹಾಗೂ ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣ ವಿರೋಧಿಸಿ ರೈತಸಂಘದ ಕಾರ್ಯಕರ್ತರು ಸೋಮವಾರ ನಗರದಲ್ಲಿ ರಸ್ತೆ ತಡೆ ನಡೆಸಿದರು.

ಕಾವೇರಿ ವನದಲ್ಲಿರುವ ವಿಶ್ವೇಶ್ವರಯ್ಯ ಪ್ರತಿಮೆ ಎದುರಿನ ಬೆಂಗಳೂರು ಮೈಸೂರು ಹೆದ್ದಾರಿ ತಡೆ ನಡೆಸಿದ ರೈತರು, ರೈತರ ಪ್ರತಿಭಟನಾ ಹಕ್ಕು ದಮನ ಯತ್ನ ನಡೆಸಿರುವ ಕೇಂದ್ರ ಸರಕಾರ ಮತ್ತು ಮೈಷುಗರ್ ಗುತ್ತಿಗೆ ನೀಡಿರುವ ರಾಜ್ಯ ಸರಕಾದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಕೇಂದ್ರ ಸರಕಾರ ಕೃಷಿ ಕಾಯ್ದೆಗೆ ತಿದ್ದುಪಡಿ ತಂದು ರೈತರು, ಕೃಷಿ ಕಾರ್ಮಿಕರನ್ನು ನಾಶ ಮಾಡಲು ಹೊರಟಿದೆ. ಸಂಪೂರ್ಣ ಕೃಷಿ ಕಾರ್ಪೋರೇಟ್ ಬಂಡವಾಳಶಾಹಿಗಳಿಗೆ ಒಪ್ಪಿಸಲು ಮುಂದಾಗಿದೆ. ನರೇಂದ್ರ ಮೋದಿ ಸರಕಾರ ರೈತ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾಯ್ದೆಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ಆದರೂ, ಸರಕಾರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಸಂಸತ್ತಿನಲ್ಲಿ ಚರ್ಚಿಸದೆ ಏಕಾಏಕಿ ಕಾಯ್ದೆಗೆ ತಿದ್ದುಪಡಿ ತಂದು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ಕಿಡಿಕಾರಿದರು.

ದಿಲ್ಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಸಾವಿರಾರು ರೈತರನ್ನು ತಡೆದು ಪೊಲೀಸರ ಮೂಲಕ ದೌರ್ಜನ್ಯ ಎಸಗಲಾಗಿದೆ. ಆ ಮೂಲಕ ರೈತರ ಹಕ್ಕನ್ನು ಕಸಿಯುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ರೈತರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು. ದೆಹಲಿಯಲ್ಲಿ ಪ್ರತಿಭಟನೆ ಮಾಡಲು ಅವಕಾಶ ನೀಡಬೇಕು. ರೈತವಿರೋಧಿ ಕೃಷಿ ಕಾಯ್ದೆಯನ್ನು ಕೈಬಿಡಬೇಕು. ಇಲ್ಲದಿದ್ದರೆ ರೈತರ ಉಗ್ರ ಪ್ರತಿರೋಧವನ್ನು ಕೇಂದ್ರ ಸರಕಾರ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಹಾಗೆಯೇ ಸರಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಷುಗರ್ ಅನ್ನು ಸರಕಾರವೇ ಆರಂಭಿಸವಂತೆ ಆರಂಭದಿಂದಲೂ ಒತ್ತಾಯಿಸುತ್ತಲೇ ಬರಲಾಗಿದೆ. ಆದರೆ, ರಾಜ್ಯ ಸರಕಾರ ಕಾರ್ಖಾನೆಯನ್ನು 40 ವರ್ಷ ಗುತ್ತಿಗೆ ನೀಡಲು ಹೊರಟಿದೆ ಎಂದು ಅವರು ಕಿಡಿಕಾರಿದರು.

ಕಾರ್ಖಾನೆಯನ್ನು ಸರಕಾರವೇ ಆರಂಭಿಸಬೇಕು. ದಕ್ಷ ಅಧಿಕಾರಿಯನ್ನು ನೇಮಿಸಬೇಕು. ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News