ಟಿಪ್ಪುವನ್ನು ಹಳದಿ ಕಣ್ಣಿನಿಂದ ನೋಡಲಾಗುತ್ತಿದೆ: ಪ್ರೊ.ನಂಜರಾಜೇ ಅರಸ್

Update: 2020-11-30 16:50 GMT

ಮಂಡ್ಯ, ನ.30: ಟಿಪ್ಪು ಸುಲ್ತಾನ್ ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಕ್ತಿ ಎಂಬ ಕಾರಣಕ್ಕೆ ಆರೆಸ್ಸೆಸ್, ಕೆಲವು ಹಿಂದೂಪರ ಸಂಘಟನೆಗಳು ಆತನನ್ನು ಹಳದಿ ಕಣ್ಣುಗಳಿಂದ ನೋಡುತ್ತಿವೆ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ಸಾಹಿತಿ, ಚಿಂತಕರ ಜತೆಗೂಡಿ ಶ್ರೀರಂಗಪಟ್ಟಣದ ಸ್ಮಾರಕಗಳ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, ಟಿಪ್ಪು ಕೊಡಗಿನಲ್ಲಿ 90 ಸಾವಿರ ಹಿಂದೂಗಳನ್ನು ಕೊಂದ ಎಂದು ಹಸಿ ಸುಳ್ಳು ಹೇಳುತ್ತಿದ್ದಾರೆ. ಮೈಸೂರು ಹುಲಿಯಾಗಿದ್ದವನು ಅವರ ಕಣ್ಣಿಗೆ ಕೇವಲ ಮುಸಲ್ಮಾನನಾಗಿ ಕಾಣುತ್ತಿದ್ದಾನೆ. ಟಿಪ್ಪು ಹಿಂದೂ ಆಗಿದ್ದರೆ ಭಾರತ ರತ್ನ ಪ್ರಶಸ್ತಿ ಕೊಡಿ ಎಂದು ಒತ್ತಾಯಿಸುತ್ತಿದ್ದರು ಎಂದರು.

ಟಿಪ್ಪುವನ್ನು ಆ ಕಾಲಘಟ್ಟದ ರಾಜನಾಗಿ ನೋಡಬೇಕು. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಭಾಗಿಯಾಗಿದ್ದ ಬ್ರಿಟೀಷ್ ಬರಹಗಾರ ಕರ್ನಲ್ ವಿಲ್ಸ್, ಟಿಪ್ಪು ಸುಲ್ತಾನನ ಬಗ್ಗೆ ನೈಜ ಸಂಗತಿಗಳನ್ನು ದಾಖಲಿಸಿದ್ದಾನೆ. ಒಬ್ಬ ವ್ಯಕ್ತಿ, ಒಂದು ಘಟನೆ ಬಗ್ಗೆ ಮಾತನಾಡುವಾಗ ಸತ್ಯ ಶೋಧನೆ ಮಾಡಬೇಕು ಎಂದು ಅವರು ಹೇಳಿದರು.

ಡಾ.ಕೆ.ವೈ.ಶ್ರೀನಿವಾಸ್, ಕುಂತಿಬೆಟ್ಟ ಚಂದ್ರಶೇಖರಯ್ಯ, ಹಾರೋಹಳ್ಳಿ ಧನ್ಯಕುಮಾರ್, ಕ್ಯಾತನಹಳ್ಳಿ ಗುರು, ಅಮಿತ್, ಪ್ರಸನ್ನ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News