ರಾಜ್ಯಾದ್ಯಂತ ಡಿ.1ರಿಂದ ವೈದ್ಯಕೀಯ ಕಾಲೇಜುಗಳು ಆರಂಭ

Update: 2020-11-30 17:26 GMT

ಬೆಂಗಳೂರು, ನ.30: ರಾಜ್ಯಾದ್ಯಂತ ನಾಳೆ(ಡಿ.1)ಯಿಂದ ಎಲ್ಲ ವೈದ್ಯಕೀಯ ಕಾಲೇಜುಗಳು ಹಾಗೂ ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಗಳು ಪುನರ್ ಆರಂಭವಾಗಲಿವೆ.

ಕೇಂದ್ರ ಸರಕಾರ, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ), ಯುಜಿಸಿ ಮತ್ತು ರಾಜ್ಯ ಸರಕಾರದ ಆದೇಶ ಮತ್ತು ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ವೈದ್ಯಕಿಯ ಪದವಿ ಕಾಲೇಜುಗಳನ್ನು ಆರಂಭಿಸುವಂತೆ ರಾಜೀವ್‍ ಗಾಂದಿ ಆರೋಗ್ಯ ವಿಜ್ಞಾನಗಳ ವಿ.ವಿ. ಸುತ್ತೋಲೆ ಹೊರಡಿಸಿದೆ.

ಎಲ್ಲ ಸಂಯೋಜಿತ ವೈದ್ಯಕೀಯ ಕಾಲೇಜುಗಳನ್ನು ನಾಳೆಯಿಂದ ಪುನರಾರಂಭಗೊಳಿಸಿ ತಕ್ಷಣವೇ ಪ್ರಾಯೋಗಿಕ ತರಗತಿಗಳನ್ನು ನಡೆಸುವ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯನ್ನು ಆನ್‍ಲೈನ್ ಮತ್ತು ಭೌತಿಕ ಹಾಜರಾತಿ ಎರಡೂ ರೀತಿಯಲ್ಲೂ ನಡೆಸಬಹುದು. ತರಗತಿ ಹಾಜರಾತಿ ಕಡ್ಡಾಯಗೊಳಿಸುವಂತಿಲ್ಲ. ಕಾಲೇಜಿಗೆ ಖುದ್ದು ಹಾಜರಾಗುವ ಅಥವಾ ಆನ್‍ಲೈನ್ ಶಿಕ್ಷಣ ಪಡೆಯುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡಬೇಕು ಎಂದು ವಿ.ವಿ. ಸೂಚನೆ ನೀಡಿದೆ.

ಕೋವಿಡ್ ಪರೀಕ್ಷೆ ಕಡ್ಡಾಯ: ಪದವಿ ಕಾಲೇಜುಗಳ ಮಾದರಿಯಲ್ಲೇ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಕಾಲೇಜಿಗೆ ಬರುವ ಮುನ್ನ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿಯೊಂದಿಗೆ ಹಾಜರಾಗಬೇಕು. ವಿದ್ಯಾರ್ಥಿಗಳು ಪೋಷಕರ ಲಿಖಿತ ಅನುಮತಿ ಪತ್ರ ತರಬೇಕು ಎಂದು ಸೂಚಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News