ಯೋಗೀಶ್‍ ಗೌಡ ಹತ್ಯೆ ಪ್ರಕರಣ: ತನಿಖಾಧಿಕಾರಿ ಟಿಂಗರಿಕರ್ ಗೆ ಹೈಕೋರ್ಟ್ ನಿಂದ ಜಾಮೀನು

Update: 2020-11-30 17:33 GMT

ಬೆಂಗಳೂರು, ನ.30: ಹುಬ್ಬಳ್ಳಿ ಜಿಪಂ ಕ್ಷೇತ್ರದ ಸದಸ್ಯರಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಚೆನ್ನಕೇಶವ ಟಿಂಗರಿಕರ್ ಅವರಿಗೆ ಧಾರವಾಡ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಸಿಬಿಐನಿಂದ ಬಂಧನಕ್ಕೆ ಒಳಗಾಗುವ ಆತಂಕದಲ್ಲಿದ್ದ ಟಿಂಗರಿಕರ್, ಈ ಹಿಂದೆ ಧಾರವಾಡದ 4ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಮಾಡಿದ್ದ ನ್ಯಾಯಾಲಯ, ಜಾಮೀನು ನೀಡಲು ನಿರಾಕರಿಸಿ ಅರ್ಜಿ ವಜಾಗೊಳಿಸಿತ್ತು.

ಬಳಿಕ ನಿರೀಕ್ಷಣಾ ಜಾಮೀನು ಕೋರಿ ಟಿಂಗರಿಕರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ನ್ಯಾಯಪೀಠವು ವಕೀಲರ ವಾದ ಆಲಿಸಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

2016ರ ಜೂನ್ 15ರಂದು ಯೋಗೀಶ್‍ಗೌಡರ ಹತ್ಯೆ ನಡೆದಿತ್ತು. ಸದ್ಯ ಸಿಸಿಬಿಯ ಕಮಿಷನರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿಂಗರಿಕರ್, ಆ ಸಮಯದಲ್ಲಿ ಧಾರವಾಡ ಉಪ ನಗರ ಪೊಲೀಸ್ ಠಾಣೆಯ ಸಿಪಿಐ ಆಗಿದ್ದರು. ಕೊಲೆಯ ನಂತರ ಸಾಕ್ಷಿ ನಾಶ ಆರೋಪದ ಹಿನ್ನೆಲೆಯಲ್ಲಿ ಟಿಂಗರಿಕರ್ ಅವರನ್ನು ಸಿಸಿಬಿ ಎರಡು ಬಾರಿ ವಿಚಾರಣೆಗೆ ಕರೆದಿತ್ತು. ಬಳಿಕ ಸಿಬಿಐ ಕೂಡ ವಿಚಾರಣೆ ನಡೆಸಿತ್ತು. ಸದ್ಯ ಅವರು ಬಂಧನ ಭೀತಿಯಿಂದಲೇ ರಜೆ ಪಡೆದಿದ್ದಾರಾ ಎನ್ನುವ ಶಂಕೆ ವ್ಯಕ್ತವಾಗಿದೆ.

ಟಿಂಗರಿಕರ್ ಪರ ವಾದಿಸಿದ್ದ ವಕೀಲರು, ಟಿಂಗರಿಕರ್ ಅವರೇ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಹೀಗಾಗಿ, ಅವರ ಪಾತ್ರ ಏನೂ ಇಲ್ಲ. ಆದರೂ ಸಿಬಿಐ ಅಧಿಕಾರಿಗಳು ಟಿಂಗರಿಕರ್ ಅವರನ್ನು ಬಂಧಿಸಲು ಸರಕಾರದಿಂದ ಅನುಮತಿ ಪಡೆದಿದ್ದಾರೆ. ಹೀಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ವಾದ ಆಲಿಸಿದ್ದ ನ್ಯಾಯಪೀಠ, ಪ್ರಕರಣದ ಕುರಿತು ಇನ್ನೂ ಹೆಚ್ಚಿನ ವಿಚಾರಣೆಗೆ ಹಾಗೂ ಸಿಬಿಐ ಪರ ವಕೀಲರ ವಾದ ಕೇಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು ವಿಚಾರಣೆ ಮುಂದೂಡಿತು. ಇಂದು(ನ.30) ಟಿಂಗರಿಕರ್ ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News