ಚಂದ್ರಗ್ರಹಣ ಹಿನ್ನೆಲೆ: ಉಪಾಹಾರ, ಹಣ್ಣುಗಳನ್ನು ಸೇವಿಸಿ ಮೂಢನಂಬಿಕೆಯ ವಿರುದ್ಧ ಜಾಗೃತಿ

Update: 2020-11-30 18:08 GMT

ಬೆಂಗಳೂರು, ನ.30: ಚಂದ್ರ ಗ್ರಹಣದ ಅವಧಿಯಲ್ಲಿ ಉಪಾಹಾರ ಹಾಗೂ ಹಣ್ಣುಗಳನ್ನು ಸೇವಿಸಿ, ಮೂಢನಂಬಿಕೆಯ ವಿರುದ್ಧ ವಿನೂತನವಾಗಿ ಜಾಗೃತಿ ಮೂಡಿಸಿದರು.

ಸೋಮವಾರ ನಗರದ ಮೌರ್ಯ ವೃತ್ತದ ಬಳಿ ಮೂಢನಂಬಿಕೆ ವಿರೋಧಿ ಒಕ್ಕೂಟದ ನೇತೃತ್ವದಲ್ಲಿ ಜಮಾಯಿಸಿದ ಪ್ರಗತಿಪರ ಚಿಂತಕರು, ಹಿರಿಯ ಸಾಹಿತಿಗಳು, ಹೋರಾಟಗಾರರು, ಗ್ರಹಣದ ವೇಳೆಯಲ್ಲಿ ಉಪಾಹಾರ, ಹಣ್ಣುಗಳನ್ನು ಸೇವಿಸಿ, ಮೌಢ್ಯಕ್ಕೆ ಬಲಿಯಾಗಬೇಡಿ ಎಂದು ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವೆ ಲಲಿತಾ ನಾಯಕ್, ಚಂದ್ರ ಗ್ರಹಣ ನಡೆಯುವುದು ಖಗೋಳದಲ್ಲಿ. ಭೂಮಿಯ ಮೇಲೆ ಅದು ಪರಿಣಾಮ ಬೀರುವುದಿಲ್ಲ. ಕೆಲವರು ಗ್ರಹಣದ ಬಗ್ಗೆ ತಪ್ಪಾಗಿ ಬಿಂಬಿಸಿ, ಲಾಭ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಪ್ರಾರ್ಥನ ಕೇಂದ್ರಗಳಲ್ಲಿ ಜ್ಞಾನದ ಜ್ಯೋತಿ ಬೆಳಗಿಸುವ ಕೆಲಸವಾಗಬೇಕು ಎಂದು ನುಡಿದರು.

ಹೋರಾಟಗಾರ ಮಾವಳ್ಳಿ ಶಂಕರ್ ಮಾತನಾಡಿ, ದೇಶದ ಜನರ ಮನಸ್ಸಿನಲ್ಲಿ ತುಂಬಿಕೊಂಡಿರುವ ಮೂಢನಂಬಿಕೆಯನ್ನು ಮೊದಲು ತೊಲಗಿಸಬೇಕಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಘಟಿತವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

ಜನರು ವೈಜ್ಞಾನಿಕತೆಯನ್ನು ಅರ್ಥ ಮಾಡಿಕೊಳ್ಳಬೇಕು. ದಿನದಿಂದ ದಿನಕ್ಕೆ ವಿಜ್ಞಾನ ಬೆಳೆಯುತ್ತಿದೆ. ಆದರೆ, ಇನ್ನೂ ಜನರು ಮೌಢ್ಯದಲ್ಲಿಯೇ ತೇಲಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ದಸಂಸ ಹೋರಾಟಗಾರ ಮೋಹನ್ ರಾಜ್ ಮಾತನಾಡಿ, ಕೆಲ ಖಾಸಗಿ ಸುದ್ದಿವಾಹಿನಿಗಳ ಮೂಲಕ ಜನರನ್ನು ಭಯದ ವಾತಾವರಣಕ್ಕೆ ಕಳುಹಿಸಲಾಗುತ್ತಿದೆ. ಇನ್ನು, ಅಲ್ಲಿ ಬರುವ ಜ್ಯೋತಿಷಿಗಳು ಭಯೋತ್ಪಾದಕರಂತಿದ್ದು, ಇವರ ವಿರುದ್ಧ ಸರಕಾರಗಳು ಪರಿಣಾಮಕಾರಿ ಆಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಹೋರಾಟಗಾರ ಎ.ಜೆ.ಖಾನ್, ಮೂಢನಂಬಿಕೆ ವಿರೋಧಿ ಒಕ್ಕೂಟದ ಸಂಘಟನಾಕಾರ ಟಿ.ನರಸಿಂಹಮೂರ್ತಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News