ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಎಚ್.ವಿಶ್ವನಾಥ್ ನಿರ್ಧಾರ

Update: 2020-12-01 12:21 GMT

ಬೆಂಗಳೂರು, ಡಿ.1: ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ನನ್ನ ಅನರ್ಹತೆ ಕುರಿತಂತೆ ಆದೇಶ ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಈ ನೆಲದ ಕಾನೂನಿಗೆ ಗೌರವ ನೀಡುತ್ತೇನೆ. ಆದರೆ, ಆದೇಶದ ಬಗ್ಗೆ ಮೇಲ್ಮನವಿ ಸಲ್ಲಿಸುವಂತೆ ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ, ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ರಾಜಕಾರಣವನ್ನು ವ್ಯವಹಾರಿಕವಾಗಿ ತೆಗೆದುಕೊಂಡಿಲ್ಲ. ಲಾಭ, ನಷ್ಟ ನೋಡಿಕೊಂಡು ರಾಜಕಾರಣವನ್ನೂ ಮಾಡುತ್ತಿಲ್ಲ. ಹೈಕೋರ್ಟ್ ನೀಡಿರುವ ತೀರ್ಪಿನಿಂದ ಯಾವುದೇ ದೊಡ್ಡ ಆಘಾತವೂ ಆಗಿಲ್ಲ. ನಮ್ಮ ನೆಲದ ಕಾನೂನಿನ ಪ್ರಕಾರ ಏನಾಗಬೇಕೋ ಅದು ಆಗಿದೆ ಎಂದು ಹೇಳಿದರು.

ಐದು ತಿಂಗಳ ಹಿಂದೆ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಆಯ್ಕೆ ಮಾಡುವ ಸದಸ್ಯರಲ್ಲಿ 4 ಹೆಸರಿನಲ್ಲಿ ನನ್ನ ಹೆಸರೂ ಇತ್ತು. ಆದರೆ, ಹೊಸದಿಲ್ಲಿಗೆ ಹೋದಾಗ ನನ್ನ ಹೆಸರನ್ನು ಕೊನೆ ಕ್ಷಣದಲ್ಲಿ ಕೈ ಬಿಡಲಾಯಿತು. ಯಾವ ಕಾರಣಕ್ಕಾಗಿ ಕೈ ತಪ್ಪಿತು ಎಂಬುದು ನನಗೆ ತಿಳಿದಿಲ್ಲ. ಬಳಿಕ ನನ್ನನ್ನು ಪರಿಷತ್‍ಗೆ ನಾಮನಿರ್ದೇಶನ ಮಾಡಲಾಯಿತು ಎಂದರು.

ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿಲ್ಲ. ಮಾಜಿ ಸಿಎಂ ಎಚ್‍ಡಿಕೆ ಅವರೇ ಆರೋಪಿಸಿರುವಂತೆ ಸಿದ್ದರಾಮಯ್ಯನವರಿಂದಲೇ ಸರಕಾರ ಪತನವಾಯಿತು. ಸಿದ್ದರಾಮಯ್ಯನವರು ಕುಮಾರಸ್ವಾಮಿ ಅವರ ಮೇಲೆ ಆರೋಪಿಸುತ್ತಾರೆ. ಪರಸ್ಪರ ಹೊಂದಾಣಿಕೆ ಇಲ್ಲದ ಇಂಥ ಸರಕಾರ ಕೆಡವಲು ನಾವು ಕಾರಣರಾಗಿದ್ದೇವೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.

ಯಾರೂ ನಮ್ಮಿಂದ ಸರಕಾರ ರಚನೆ ಮಾಡಿ ಏನೇನೋ ಆಗಿದ್ದಾರೆ. ಅವರೆಲ್ಲ ನಮ್ಮ ಸಹಾಯಕ್ಕೆ ಬರುತ್ತಿಲ್ಲ. ನನ್ನ ಹೆಸರನ್ನು ಹೊಸದಿಲ್ಲಿ ಸಚಿವ ಸ್ಥಾನದ ಪಟ್ಟಿಯಿಂದ ಕೈಬಿಟ್ಟಿರುವ ನೋವು ಈಗಲೂ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ಸಾ.ರಾ.ಮಹೇಶ್ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ವಿಶ್ವನಾಥ್ ಅವರು, ಕೊಚ್ಚೆಗುಂಡಿಗೆ ಕಲ್ಲು ಎಸೆದು ನಾನು ಕೊಳಕು ಮಾಡಿಕೊಳ್ಳುವುದಿಲ್ಲ. ಅವನ ಬಗ್ಗೆ ನನಗೆ ಮಾತನಾಡಲೂ ಇಷ್ಟವಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ನನ್ನ ಸೋಲಿಗೆ ಸಿ.ಪಿ.ಯೋಗೇಶ್ವರ್ ಕಾರಣ

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ನೂರಕ್ಕೆ ನೂರರಷ್ಟು ಸಚಿವರನ್ನಾಗಿ ಮಾಡುತ್ತೇವೆ ಎಂದು ಸಿಎಂ ಹೇಳಿಕೆ ನೀಡಿದ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಎಚ್.ವಿಶ್ವನಾಥ್, ಹುಣಸೂರಿನಲ್ಲಿ ನನ್ನ ಸೋಲಿಗೆ ಕಾರಣವಾಗಿರುವ ಯೋಗೇಶ್ವರ್ ರನ್ನು ಪಕ್ಷದ ನಿಷ್ಠಾವಂತರೇ ಎಂಬುದನ್ನು ಮೊದಲು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಹುಣಸೂರಿನಲ್ಲಿ ನನಗೆ ಟಿಕೆಟ್ ನೀಡುವುದಕ್ಕೂ ಮುನ್ನವೇ ಯೋಗೇಶ್ವರ್ ಅವರು ಸೀರೆ ಹಂಚಿದ್ದರು. ನಾನೇ ಅಭ್ಯರ್ಥಿ ಎಂದು ಸೀರೆ ಹಂಚಿ ಸಾಕಷ್ಟು ಸಮಸ್ಯೆ ಉಂಟು ಮಾಡಿದ್ದರು. ನಾನು ಅಭ್ಯರ್ಥಿ ಎಂದು ಘೋಷಣೆ ಆದ ಬಳಿಕ ನನಗೆ ಚುನಾವಣಾ ಖರ್ಚಿಗೆ ಬಂದಿದ್ದ ದೊಡ್ಡ ಮೊತ್ತದ ಹಣವನ್ನು ಸಿ.ಪಿ.ಯೋಗೇಶ್ವರ್, ಸಂತೋಷ್ ಪಡೆದುಕೊಂಡು ಮೋಸ ಮಾಡಿದ್ದರು. ನನ್ನ ಸೋಲಿಗೆ ಇದು ಕೂಡ ಕಾರಣ. ಈ ಬಗ್ಗೆ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ, ಅದು ನನಗೆ ಬೇಸರವಾಗಿದೆ. ಯಾರ ಸಹಕಾರದಿಂದ ಕುರ್ಚಿಯ ಮೇಲೆ ಕುಳಿತಿದ್ದಾರೆ? ಈ ವಿಚಾರವನ್ನು ಕೆಲವರು ಮರೆತಿದ್ದಾರೆ ಎಂದು ಸಿಎಂ ವಿರುದ್ಧ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅಸಮಾಧಾನ ಹೊರ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News