ಗರ್ಭಪಾತಕ್ಕೆ ಕಾರಣರಾದ ಸಿದ್ದು ಸವದಿ ವಿರುದ್ಧ ಕಾನೂನು ಕ್ರಮಕೈಗೊಳ್ಳಿ: ಪುಷ್ಪ ಅಮರನಾಥ್

Update: 2020-12-01 13:44 GMT

ಬೆಂಗಳೂರು, ಡಿ.1: ಬಾಗಲಕೋಟೆಯ ಮಹಾಲಿಂಗಪುರ ಪುರಸಭೆ ಚುನಾವಣೆಯಂದು ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಮೇಲೆ ಗಂಭೀರ ಹಲ್ಲೆ ಮಾಡಿ, ಗರ್ಭಪಾತಕ್ಕೆ ಕಾರಣರಾದ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಒತ್ತಾಯಿಸಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನ.9ರಂದು ಬಾಗಲಕೋಟೆಯ ಮಹಾಲಿಂಗಪುರ ಪುರಸಭೆ ಚುನಾವಣೆಯಂದು ಪುರಸಭಾ ಸದಸ್ಯೆ ಚಾಂದಿನಿ ನಾಯಕ್ ಪುರಸಭೆಗೆ ಆಗಮಿಸುತ್ತಿದ್ದ ವೇಳೆ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಸದಸ್ಯೆಯನ್ನು ಪುರಸಭೆಯ ಒಳಗೆ ಬಿಡದೆ ಕೆಳಗೆ ತಳ್ಳಿ ಬೀಳುವಂತೆ ಮಾಡಿದ್ದಾರೆ. ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರ ನೂಕಾಟದಿಂದಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದ ಗರ್ಭವತಿಯಾಗಿದ್ದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್‍ರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರಿಗೆ ಗರ್ಭಪಾತವಾಗಿದೆ. ಜನಪ್ರತಿನಿಧಿಯ ಮೇಲೆ ಇಂತಹ ಹಲ್ಲೆಗಳಾದರೆ ಇನ್ನು ಸಾಮಾನ್ಯ ಮಹಿಳೆಯರ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲವೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

5 ಕೋಟಿ ರೂ.ಪರಿಹಾರ: ಭ್ರೂಣ ಹತ್ಯೆಗೆ ಕಾರಣರಾದ ಶಾಸಕ ಹಾಗೂ ಬೆಂಬಲಿಗರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಭ್ರೂಣ ಹತ್ಯೆ ನಷ್ಟ ಪರಿಹಾರವಾಗಿ 5 ಕೋಟಿ ರೂ.ಧನಸಹಾಯ ಘೋಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ರೂಪ ಶಶಿಧರ್, ಜಿಲ್ಲಾ ಪಂಚಾಯತ್ ಸದಸ್ಯೆ ವೀಣಾ ಕಾಶಪ್ಪನವರ್, ಸೌಮ್ಯಾರೆಡ್ಡಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News