ವಿಶ್ವನಾಥ್ ಬೆನ್ನಿಗೆ ನಿಂತ ಬಿಜೆಪಿ ನಾಯಕರು: ನ್ಯಾಯಾಲಯದ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸಲು ನಿರ್ಧಾರ

Update: 2020-12-01 14:55 GMT

ಚಿಕ್ಕಮಗಳೂರು, ಡಿ.1: ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ಸಂಬಂಧ ನ್ಯಾಯಾಲಯದ ತೀರ್ಪಿಗೆ ನಾವು ಹೊಣೆಯಲ್ಲ. ಆದರೆ ವಿಶ್ವನಾಥ್ ಅವರಿಗೆ ನಾವು ಮೋಸ ಮಾಡಲ್ಲ. ನಾವು ಅವರ ಪರ ಇದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವಂತಿಲ್ಲ ಎಂದು ನ್ಯಾಯಾಲಯದ ತೀರ್ಪಿನ ಬಗ್ಗೆ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವಲ್ಲಿ ಎಚ್.ವಿಶ್ವನಾಥ್ ಅವರ ಪಾತ್ರವೂ ಇದೆ. ನಮ್ಮ ಜೊತೆ ಬಂದವರ ಬೆನ್ನಿಗೆ ನಾವು ಚೂರಿ ಹಾಕುವುದಿಲ್ಲ. ನ್ಯಾಯಾಲಯದ ತೀರ್ಪಿಗೆ ನಾವು ಹೊಣೆಯಾಗಲು ಸಾಧ್ಯವಿಲ್ಲ. ಆದರೆ ನಾವು ವಿಶ್ವನಾಥ್ ಅವರಿಗೆ ಮೋಸ ಮಾಡಲ್ಲ. ಅವರು ಚುನಾವಣೆಯಲ್ಲಿ ಸೋತರೂ ಪಕ್ಷ ಅವರನ್ನು ಎಮ್ಮೆಲ್ಸಿ ಮಾಡಿದೆ ಎಂದರು.

ಸೋತ ಅಭ್ಯರ್ಥಿಗೆ ಮಣೆ ಹಾಕುವ ಅಭ್ಯಾಸ ಬೇರೆ ಪಕ್ಷದಲ್ಲಿಲ್ಲ. ಆದರೆ ಬಿಜೆಪಿ ಪಕ್ಷ ವಿಶ್ವನಾಥ್ ಅವರಿಗೆ ಮಣೆ ಹಾಕಿದ್ದು, ಎಮ್ಮೆಲ್ಸಿಯನ್ನಾಗಿಯೂ ಮಾಡಿದೆ. ಅವರ ಪರವಾಗಿ ಅಡ್ವಕೆಟ್ ಜನರಲ್ ಮತ್ತು ಪಕ್ಷದ ಮುಖಂಡರು ಏನೆಲ್ಲಾ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿದ್ದೇವೆ. ಅದನ್ನೂ ಮೀರಿ ನ್ಯಾಯಾಲಯದ ತೀರ್ಪಿಗೆ ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ವಿಶ್ವನಾಥ್ ಪರ ನಾವು ಮತ್ತೊಂದು ಪ್ರಯತ್ನ ಮಾಡುತ್ತೇವೆ. ತೀರ್ಪಿನ ವಿರುದ್ಧ ಮತ್ತೆ ಅಪೀಲು ಸಲ್ಲಿಸುತ್ತೇವೆ ಎಂದ ಅವರು ವಿಶ್ವನಾಥ್ ಅವರಿಗೆ ಯಾವುದೇ ಕಾರಣಕ್ಕೂ ಮೋಸ ಆಗಲು ಬಿಡುವುದಿಲ್ಲ ಎಂದರು.

ಇದೇ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಟಿ.ರವಿ, ನಾನು ತೀರ್ಪನ್ನು ಅಧ್ಯಯನ ಮಾಡಿಲ್ಲ. ಯಾವ ಹಿನ್ನೆಲೆಯಲ್ಲಿ ಹೀಗೆ ತೀರ್ಪು ಬಂದಿದೆಯೋ ಗೊತ್ತಿಲ್ಲ. ತೀರ್ಪು ಅಧ್ಯಯನ ಮಾಡಿ ಪ್ರತಿಕ್ರಿಯೆ ನೀಡುತ್ತೇನೆ ಎಂದಷ್ಟೇ ಹೇಳಿದರು.

ಎಸ್ಟಿ ಮೀಸಲಾತಿ ಚರ್ಚೆಗೆ ಸಿದ್ದರಾಮಯ್ಯರನ್ನು ತಾಯಿ ಆಣೆಗೂ ಕರೆದಿದ್ದೇವೆ: 

ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಸಂಬಂಧದ ಚರ್ಚೆಗೆ ಈಶ್ವರಪ್ಪ ನನ್ನನ್ನು ಕರೆದೇ ಇಲ್ಲ ಎಂದು ಮಾಜಿ ಸಿಎಂ ಸಿದ್ದಾರಾಮಯ್ಯ ಅವರು ಹೇಳಿಕೆ ನೀಡಿರುವುದಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ನನ್ನ ತಾಯಿಯ ಆಣೆಗೂ, ಮಕ್ಕಳಾಣೆಗೂ ಸತ್ಯವಾಗಿ ಸಿದ್ದರಾಮಯ್ಯ ಅವರನ್ನೂ ಚರ್ಚೆಗೆ ಕರೆದಿದ್ದೇನೆ. ಸ್ವಾಮೀಜಿಯೊಬ್ಬರು ಅವರ ಮನೆ ಬಾಗಿಲಿಗೆ ಹೋಗಿ ಕರೆದಿದ್ದಾರೆ. ಇದನ್ನು ಇನ್ಯಾವ ಭಾಷೆಯಲ್ಲಿ ಹೇಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಗ್ರಾಮ ಸ್ವರಾಜ್ ಕಾರ್ಯಕ್ರಮಕ್ಕೆ ಕಡೂರು ತಾಲೂಕಿನ ಬೀರೂರು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿರುವ ಬೇಡಿಕೆ ಬಗ್ಗೆ ಚರ್ಚೆ ನಡೆಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದೇವೆ. ಸಮುದಾಯದ ಸ್ವಾಮೀಜಿ ಅವರ ಮನೆಗೆ ಹೋಗಿ ಕರೆದು ಬಂದಿದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಏಕೆ ರಾಜಕಾರಣ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಈಶ್ವರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News