×
Ad

ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ನೇಮಕ ಪ್ರಶ್ನಿಸಿ ಪಿಐಎಲ್: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-12-01 20:27 IST

ಬೆಂಗಳೂರು, ಡಿ.1: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಎನ್.ಆರ್.ಸಂತೋಷ್ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ನಗರದ ವಕೀಲ ಎಸ್.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.

ಅರ್ಜಿದಾರರೂ ಆಗಿರುವ ವಕೀಲ ಎಸ್.ಉಮಾಪತಿ ಅವರು ವಾದಿಸಿ, ಎನ್.ಆರ್.ಸಂತೋಷ್ ಅವರನ್ನು ಕಾನೂನು ಬಾಹಿರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ. ನಿಯಮದ ಪ್ರಕಾರ ಖಾಸಗಿ ವ್ಯಕ್ತಿಗೆ ಸಿಎಂ ಕಾರ್ಯದರ್ಶಿ ಹುದ್ದೆ ಹಾಗೂ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ನೀಡುವಂತಿಲ್ಲ. ಆದರೂ ಸರಕಾರ ಎನ್.ಆರ್.ಸಂತೋಷ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿರುವುದು ಕಾನೂನು ಬಾಹಿರವಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಈ ನೇಮಕದಿಂದ ಸಾರ್ವಜನಿಕರ ತೆರಿಗೆ ಹಣವನ್ನು ಅನಗತ್ಯವಾಗಿ ವ್ಯಯಿಸಲಾಗುತ್ತಿದೆ. ಹೀಗಾಗಿ, ನ್ಯಾಯಾಲಯ ಎನ್.ಆರ್.ಸಂತೋಷ್ ನೇಮಕ ಆದೇಶಕ್ಕೆ ಸಂಬಂಧಿಸಿದ ಕಡತಗಳನ್ನು ತರಿಸಿಕೊಂಡು ಪರಿಶೀಲಿಸಬೇಕು ಹಾಗೂ ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಸರಕಾರಕ್ಕೆ ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜ.11ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News