ಮಾಜಿ ಸಚಿವ ವರ್ತೂರು ಪ್ರಕಾಶ್ ರನ್ನು ಅಪಹರಿಸಿ 30 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು

Update: 2020-12-01 16:17 GMT

ಬೆಂಗಳೂರು, ಡಿ.1: ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರನ್ನು ಅಪಹರಿಸಿರುವ ದುಷ್ಕರ್ಮಿಗಳ ತಂಡವೊಂದು ಅವರಿಗೆ ಹಲ್ಲೆ ನಡೆಸಿ, 30 ಕೋಟಿ ರೂ.ಗಳಿಗೆ ಬೇಡಿಕೆಯಿಟ್ಟಿರುವ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆ ಕುರಿತು ಸ್ವತಃ ದೂರ ಸಲ್ಲಿಕೆ ಮಾಡಿರುವ ವರ್ತೂರ್ ಪ್ರಕಾಶ್, ನ.25ರಂದು ಕೋಲಾರ ನಗರದ ಹೊರವಲಯದಲ್ಲಿರುವ ತಮ್ಮ ತೋಟದ ಮನೆಯಿಂದ ಚಾಲಕ ಸುನೀಲ್ ಸೇರಿದಂತೆ ನನ್ನನ್ನು 8 ಮಂದಿ ದುಷ್ಕರ್ಮಿಗಳು ಅಪಹರಿಸಿದ್ದರು. ತದನಂತರ, ಮೂರು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿ ಇರಿಸಿಕೊಂಡು, 30 ಕೋಟಿ ರೂ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದುಷ್ಕರ್ಮಿಗಳನ್ನು ನನ್ನನ್ನು ಅಪಹರಿಸಿ ವಿವಿಧ ಪ್ರದೇಶಗಳಲ್ಲಿ ಕಾರಿನಲ್ಲಿ ಸುತ್ತಾಡಿಸಿ, ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಈ ರೀತಿಯ ಕೃತ್ಯವೆಸಗಿದವರು ಯಾರೆಂದು ಗೊತ್ತಿಲ್ಲ. ಅಲ್ಲದೆ, ನ.28ರಂದು ಅಪಹರಣಕಾರರಿಂದ ಚಾಲಕ ಸುನೀಲ್ ಹಾಗೂ ನಾನು ತಪ್ಪಿಸಿಕೊಂಡು ಬಂದಿದ್ದೇವೆ ಎಂದು ಹೇಳಿದ್ದಾರೆ.

ಕಾರನ್ನು ಅಪಹರಣಕಾರರು ಇದ್ದ ಸ್ಥಳದಲ್ಲಿಯೇ ಬಿಟ್ಟು ಬಂದಿದ್ದು, ಇದು ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ದೂರು ಸಲ್ಲಿಕೆ ಮಾಡಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸುವ ಜತೆಗೆ, ತಮಗೆ ರಕ್ಷಣೆ ನೀಡುವಂತೆ ವರ್ತೂರ್ ಪ್ರಕಾಶ್ ಮನವಿ ಮಾಡಿದ್ದಾರೆ.

ಖಾರದ ಪುಡಿ ಎರಚಿ ಹಲ್ಲೆ..!
ದುಷ್ಕರ್ಮಿಗಳ ತಂಡ ಕಾರಿನಲ್ಲಿ ಬಂದು ಖಾರದ ಪುಡಿ ಎರಚಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಇಂದು(ಡಿ.1) ಬೆಳ್ಳಂದೂರು ಸ್ಮಶಾನದ ಬಳಿ ಸಂಖ್ಯೆ ಫಲಕ ಇಲ್ಲದ ಕಾರು ಪತ್ತೆಯಾಗಿದ್ದು, ಆ ಕಾರನ್ನು ಸಂಚಾರ ಪೊಲೀಸರು ಠಾಣೆ ಬಳಿ ತಂದು ನಿಲ್ಲಿಸಿದ್ದರು. ಇದೇ ಕಾರಿನಲ್ಲಿ ಕಾರದ ಪುಡಿ ಕೂಡ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News