ಆರೋಪ ಸಾಬೀತುಪಡಿಸಿದರೆ ರಾಜಕೀಯದಲ್ಲಿ ಇರುವುದಿಲ್ಲ: ಸಿದ್ದರಾಮಯ್ಯರಿಗೆ ಜಿ.ಟಿ.ದೇವೇಗೌಡ ಸವಾಲು

Update: 2020-12-01 16:26 GMT

ಮೈಸೂರು,ಡಿ.1: ಲೋಕಸಭೆ ಚುನಾವಣೆಯಲ್ಲಿ ಹಣ ಪಡೆದಿರುವುದನ್ನು ಸಿದ್ದರಾಮಯ್ಯ ಸಾಬೀತುಪಡಿಸಿದರೆ ನಾನು ರಾಜಕೀಯದಲ್ಲಿ ಇರುವುದಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಸವಾಲು ಹಾಕಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಹಣ ಪಡೆದಿದ್ದೇನೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಜಿ.ಟಿ.ದೇವೇಗೌಡ ಏನು ಅಂತ 25 ವರ್ಷದಿಂದ ಗೊತ್ತಿದೆ. 25 ವರ್ಷದಲ್ಲಿ ವರ್ಗಾವಣೆ, ಕಾಮಗಾರಿ, ಯಾವುದೇ ರೂಪದಲ್ಲಿ ದುಡ್ಡು ಪಡೆದಿರುವುದಾಗಿ ಹೇಳಲಿ. ಅದನ್ನು ಸಾಬೀತುಪಡಿಸಲಿ. ಆಗ ನಾನು ರಾಜಕಾರಣದಲ್ಲೇ ಇರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೆ. ನಮ್ಮ ಮುಖಂಡರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹೇಳಿದ್ದರು. ಬೂತ್ ಮಟ್ಟದಲ್ಲಿ ಖರ್ಚು ವ್ಯವಸ್ಥೆಗಾಗಿ ಯತೀಂದ್ರ ಹಾಗೂ ನಮ್ಮ ಪಕ್ಷದ ಜಿಲ್ಲಾಧ್ಯಕ್ಷ ರಾಜು ಹಣ ವಿತರಣೆ ಮಾಡಿದ್ದರು. ಚುನಾವಣೆಯಲ್ಲಿ ನಾನು ಹಣಕಾಸಿನ ವ್ಯವಹಾರ ಮಾಡಿಲ್ಲ. ನಾನು ವೈಯಕ್ತಿಕವಾಗಿ ಹಣ ನೀಡಿಲ್ಲ. ಅವರು ಸಹ ನನಗೆ ಹಣ ನೀಡಿಲ್ಲ. ಸ್ಪಷ್ಟವಾಗಿ ಆತ್ಮಸಾಕ್ಷಿಯಾಗಿ ನಾನು ಇದನ್ನು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ತಮ್ಮ ಹೇಳಿಕೆಗೆ ವಿವರಣೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.

ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಸೇರಿ ಎಲ್ಲ ಕಡೆ ರಾಜಕಾರಣ ಕಲುಷಿತಗೊಂಡಿದೆ. ಜೆಡಿಎಸ್‍ನಿಂದ ಗೆದ್ದಿದ್ದೇನೆ ಅದರಲ್ಲೇ ಇದ್ದೇನೆ. ಮುಂದೆ ಜೆಡಿಎಸ್‍ನಲ್ಲಿ ಉಳಿದರೂ ಅಚ್ಚರಿಯಿಲ್ಲ ಎಂದು ಹೇಳಿದರು.

ಕಳೆದ ಲೋಕಸಭೆ ಚುನಾವಣೆ ವಿಚಾರವಾಗಿ ಮಾತನಾಡಿ, ಮೈಸೂರು, ಮಂಡ್ಯ, ತುಮಕೂರಿನ ಸೋಲು ಅನುಮಾನಗಳಿಗೆ ಕಾರಣವಾಗಿತ್ತು. ಅಭ್ಯರ್ಥಿಗಳನ್ನು ಸೋಲಿಸಿದ್ದು ಹಣ ಅಲ್ಲ. ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಆಗಲಿಲ್ಲ. ದಿಢೀರ್ ಹೊಂದಾಣಿಕೆ ಆದ್ದರಿಂದ ಅದು ಕೆಲಸ ಮಾಡಲಿಲ್ಲ. ಮೋದಿ ಹವಾದಿಂದ ಎಲ್ಲರೂ ಗೆದ್ದಿದ್ದಾರೆ. ಇದಕ್ಕೆ ಬೇರೆ ಯಾರೂ ಕಾರಣ ಅಲ್ಲ. ನಾನು ಸಿದ್ದರಾಮಯ್ಯ ಅವರಿಂದ ಹಣ ಪಡೆದಿರುವ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟ ವಿವರಣೆ ನೀಡಲಿ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News