ಜೆಡಿಎಸ್ ತೊರೆಯುವ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಶಾಸಕ ವೈ.ಎಸ್.ವಿ.ದತ್ತ

Update: 2020-12-01 16:57 GMT

ಬೆಂಗಳೂರು, ಡಿ.1: ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸುವ ಕಡೆಗೆ ಯೋಚನೆ ಮಾಡುತ್ತಿದ್ದು, ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಅನ್ನು ತೊರೆಯುವುದಿಲ್ಲ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ ಸ್ಪಷ್ಟಪಡಿಸಿದ್ದಾರೆ.

ದತ್ತ ಅವರು ಜೆಡಿಎಸ್ ಪಕ್ಷವನ್ನು ತೊರೆಯಲಿದ್ದಾರೆ ಎಂದು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನಾನು ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡಲ್ಲ. ಈ ಸಂಬಂಧ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.

ಸೋಮವಾರ ರಾತ್ರಿ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿಕೊಂಡು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗಳ ಬಗ್ಗೆ ಮಾತನಾಡಿಕೊಂಡು ಬಂದಿದ್ದೇನೆ. ನನ್ನ ತಲೆಯಲ್ಲಿ ಇದುವರೆಗೂ ಬಂದಿಲ್ಲದ ಆಲೋಚನೆಯನ್ನು ಟಿವಿ ಮಾಧ್ಯಮದವರು ಸುದ್ದಿ ಅಂತ ಪ್ರಸಾರ ಮಾಡಿದ್ದಾರೆ. ಸುದ್ದಿಯನ್ನು ಇವರೇ ಸೃಷ್ಟಿಸಿ ಪ್ರಸಾರ ಮಾಡುವ ಮುನ್ನ ನಮ್ಮದೊಂದು ಪ್ರತಿಕ್ರಿಯೆ ಕೇಳಬೇಕಲ್ಲವೇ ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಜೆಡಿಎಸ್ ಪಕ್ಷದ ಕಾರ್ಯಕರ್ತರು ಮಾಧ್ಯಮಗಳು ಹಬ್ಬಿಸಿರುವ ಸುಳ್ಳು ಸುದ್ದಿಗೆ ಬಲಿಯಾಗದೆ, ಪಕ್ಷವನ್ನು ಸಂಘಟಿಸಲು ಗಮನ ನೀಡೋಣ. ಇತ್ತೀಚಿಗೆ ಪಕ್ಷದ ಸಂಘಟನೆ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳ ಸಂಬಂಧ ಪಕ್ಷದ ಕಚೇರಿಯಲ್ಲಿ ಮಾತನಾಡಿದ್ದೇನೆ. ಅದರ ಕಡೆಗೆ ಎಲ್ಲರೂ ಕೆಲಸ ಮಾಡೋಣ ಎಂದು ಅವರು ಮನವಿ ಮಾಡಿದ್ದಾರೆ.

ಇತ್ತೀಚಿಗೆ ಆಮ್ ಆದ್ಮಿ ಪಕ್ಷದ ಉಸ್ತುವಾರಿಯಾಗಿರುವ ರೋಮಿ ಭಾಟಿ ಹಾಗೂ ರಾಜ್ಯ ಸಂಚಾಲಯ ಪೃಥ್ವಿ ರೆಡ್ಡಿ ನನ್ನನ್ನು ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನ ನೀಡಿದ್ದರು. ಆದರೆ ಅವರ ಆಹ್ವಾನವನ್ನು ನಿರಾಕರಿಸಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡ ಇರುವವರೆಗೂ ಪಕ್ಷ ನಿಷ್ಠೆ ಜೆಡಿಎಸ್‍ಗೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News