ಮಂಡ್ಯ: ನೂತನ ಕೃಷಿ ಕಾಯ್ದೆಗಳ ಹಿಂಪಡೆಯಲು ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಧರಣಿ

Update: 2020-12-01 17:55 GMT

ಮಂಡ್ಯ, ಡಿ.1: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಹಾಗೂ ರೈತರ ಮೇಲಿನ ದೌರ್ಜನ್ಯ ಖಂಡಿಸಿ ರೈತ, ದಲಿತ, ಕಾರ್ಮಿಕ, ಮಹಿಳಾ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡಡೆಸಿದರು.

ವಿಶ್ವೇಶ್ವರಯ್ಯ ಪ್ರತಿಮೆ ಎದುರಿನ ಬೆಂಗಳೂರು ಮೈಸೂರು ಹೆದ್ದಾರಿ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಕೇಂದ್ರ ಸರಕಾರ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಕೃಷಿ ಕಾಯ್ದೆಗೆ ತಿದ್ದುಪಡಿ ತಂದು ರೈತರು, ಕೃಷಿ ಕಾರ್ಮಿಕರನ್ನು ನಾಶ ಮಾಡಲು ಹೊರಟಿದೆ. ಕೃಷಿಯ ಸಂಪೂರ್ಣ ಒಡೆತನವನ್ನು ಕಾರ್ಪೋರೇಟ್ ವ್ಯಾಪಾರಿಗಳಿಗೆ ಒಪ್ಪಿಸಲು ಮುಂದಾಗಿದೆ. ಇದರಿಂದ ರೈತರು ಹಾಗೂ ಕೃಷಿಯನ್ನು ಅವಲಂಬಿಸಿರುವ ಕಾರ್ಮಿಕರು ಬೀದಿಗೆ ಬೀಳಲಿದ್ದಾರೆ ಎಂದು ಅವರು ಕಿಡಿಕಾರಿದರು.

ದೇಶದ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭ ಕೃಷಿ. ಆರ್ಥಿಕತೆಗೆ ಸಿಂಹಪಾಲು ಕೃಷಿ ಕ್ಷೇತ್ರವೇ ಹೊಂದಿದೆ. ಇಂತಹ ವಿಷಯದ ಬಗ್ಗೆ ಕಾಯ್ದೆಗೆ ತಿದ್ದುಪಡಿ ತರುವಾಗ ರೈತರ ಅಭಿಪ್ರಾಯವನ್ನು ಪರಿಗಣಿಸಬೇಕು. ಆದರೆ, ಕೇಂದ್ರ ಸರಕಾರ ಏಕಾಏಕಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೊಳಿಸುವ ಅಗತ್ಯ ಏನಿತ್ತು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಕೃಷಿ ಮಸೂದೆಗಳು ರೈತರಿಗೆ ಹೊಸ ಅವಕಾಶಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರಮೋದಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದಾರೆ, ಅದು ಸುಳ್ಳು. ಈ ಕಾಯ್ದೆಗಳು ರೈತಪರವಾಗಿದ್ದರೆ ಲಕ್ಷಾಂತರ ರೈತರು ಹೋರಾಟಕ್ಕೆ ಇಳಿಯುವ ಅಗತ್ಯ ಇರಲಿಲ್ಲ ಎಂದು ಅವರು ಹೇಳಿದರು.

ಈ ಸಂಬಂಧ ದೆಹಲಿ ಚಲೋ ಹೊರಟಿದ್ದ ರೈತರ ಮೇಲೆ ಸರಕಾರ ಪೊಲೀಸರನ್ನು ಬಳಸಿಕೊಂಡು ದೌರ್ಜನ್ಯ ನಡೆಸಿದೆ. ದೌರ್ಜನ್ಯದಿಂದ ಹಲವು ರೈತರು ತೀವ್ರವಾಗಿ ಗಾಯಗೊಂಡಿದ್ದಾರೆ. ಇಂತಹ ದೌರ್ಜನ್ಯವನ್ನು ರೈತ ಸಮುದಾಯ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.

ಕೂಡಲೇ ರೈತರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು. ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು. ಹಾಗೆಯೇ ಕಾರ್ಮಿಕ ವಿರೋಧಿ ಕಾಯ್ದೆಗಳ ತಿದ್ದುಪಡಿ ಹಿಂಪಡೆಯಬೇಕು. ದಲಿತರು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದ ಸರಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಷುಗರ್ ಅನ್ನು ಖಾಸಗೀಯವರಿಗೆ 40 ವರ್ಷ ಗುತ್ತಿಗೆ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸರಕಾರವೇ ಆರಂಭಿಸವಂತೆ ಒತ್ತಾಯಿಸಿದರು.

ಎ.ಎಲ್.ಕೆಂಪೂಗೌಡ, ಸುನಂದಾ ಜಯರಾಂ, ಸಿ.ಕುಮಾರಿ, ಎಂ.ಬಿ.ಶ್ರೀನಿವಾಸ್, ಮುದ್ದೇಗೌಡ, ಟಿ.ಎಲ್.ಕೃಷ್ಣೇಗೌಡ, ಬೋರಾಪುರ ಶಂಕರೇಗೌಡ, ಇಂಡುವಾಳು ಚಂದ್ರಶೇಖರ್, ಕೀಲಾರ ಸೋಮಶೇಖರ್, ತೂಬಿನಕೆರೆ ಪ್ರಸನ್ನ, ಕುಬೇರಪ್ಪ, ಮಂಜೇಶ್‍ಗೌಡ, ಕುಂಟನಹಳ್ಳಿ ಗದ್ದೇನಿಂಗೇಗೌಡ, ಕೊತ್ತನಹಳ್ಳಿ ಉಮೇಶ್, ಇತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News