ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಮೋದಿಯೇ ಕಾರಣ: ಸಿದ್ದರಾಮಯ್ಯ ಎಚ್ಚರಿಕೆ

Update: 2020-12-02 14:21 GMT

ಬೆಂಗಳೂರು, ಡಿ.2: ಕೃಷಿ ವಿರೋಧಿ ಕಾಯಿದೆಗಳ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ರೈತರನ್ನು ಗೌರವಯುತವಾಗಿ ಕರೆದು, ಪ್ರಾಮಾಣಿಕವಾಗಿ ಮಾತುಕತೆ ನಡೆಸಬೇಕಾಗಿರುವ ನರೇಂದ್ರ ಮೋದಿ ಸರಕಾರ ಕಾಟಾಚಾರದ ಮಾತುಕತೆಯ ಮೂಲಕ ತನ್ನ ಸಹಜ ಸ್ವಭಾವವಾದ ಉದ್ಧಟತನ ಮತ್ತು ಅಪ್ರಾಮಾಣಿಕತೆಯನ್ನು ಪ್ರದರ್ಶಿಸಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಒಂದೆಡೆ ಗಂಭೀರವಾಗಿ ಮಾತುಕತೆಯನ್ನು ನಡೆಸದೆ, ಇನ್ನೊಂದೆಡೆ ರೈತ ಹೋರಾಟಗಾರರನ್ನು ಭಯೋತ್ಪಾದಕರು, ಉಗ್ರಗಾಮಿಗಳು ಎಂದೆಲ್ಲ ದೂಷಿಸುತ್ತಿರುವ ಕೇಂದ್ರದ ಬಿಜೆಪಿ ಸರಕಾರ ಸಿಖ್ ಸಮುದಾಯಕ್ಕೆ ಮಾತ್ರವಲ್ಲ, ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತರ ಪರ, ಮಾನವಹಕ್ಕುಗಳ ಪರವಾಗಿ ಹೋರಾಡುವವರನ್ನು ‘ಅರ್ಬನ್ ನಕ್ಸಲ್’ಗಳೆಂದು, ಕೋಮುವಾದದ ವಿರುದ್ಧ ಹೋರಾಡುವವರನ್ನು ದೇಶದ್ರೋಹಿಗಳೆಂದು ದೂಷಿಸುತ್ತ ಬಂದ ನರೇಂದ್ರ ಮೋದಿ ಸರಕಾರ ಈಗ ಅನ್ನ ಕೊಡುವ ರೈತರನ್ನು ಉಗ್ರಗಾಮಿಗಳೆನ್ನುವ ನೀಚಮಟ್ಟಕ್ಕೆ ಇಳಿದಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಿದ್ದೇವೆ ಎಂದು ಇಲ್ಲಿಯವರೆಗೆ ಬಡಾಯಿ ಬಿಡುತ್ತಾ ಬಂದ ಬಿಜೆಪಿ, ಈಗ ದಿಲ್ಲಿಯಲ್ಲಿನ ರೈತ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ಹೇಳುತ್ತಿರುವುದು ತಮಾಷೆಯಾಗಿದೆ. ಕಾಂಗ್ರೆಸ್ ಪಕ್ಷ ರೈತ ಹೋರಾಟಗಾರರ ಹಿಂದೆ ಇಲ್ಲ, ಅವರ ಜೊತೆಯಲ್ಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನರೇಂದ್ರ ಮೋದಿ ಸರಕಾರ ರೈತ ಹೋರಾಟಗಾರರ ತಾಳ್ಮೆಯನ್ನು ಪರೀಕ್ಷಿಸುವ ದುಸ್ಸಾಹಸಕ್ಕೆ ಇಳಿಯದೆ, ತಕ್ಷಣ ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ 3 ‘ಕಪ್ಪು ಕಾನೂನು’ಗಳನ್ನು ರದ್ದುಗೊಳಿಸಿ ಬಿಕ್ಕಟ್ಟನ್ನು ಪರಿಹರಿಸಬೇಕು. ಸರಕಾರದ ನಿರ್ಲಕ್ಷದಿಂದ ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣರಾಗುತ್ತಾರೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News