ತಣಿಯದ ಎಚ್.ವಿಶ್ವನಾಥ್ ಅಸಮಾಧಾನ: ಯೋಗೇಶ್ವರ್, ಬಿಎಸ್‌ವೈ ವಿರುದ್ಧ ಮತ್ತೊಮ್ಮೆ ಗರಂ

Update: 2020-12-02 13:02 GMT

ಮೈಸೂರು,ಡಿ.2: ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನೀಡುವುದಕ್ಕೆ ಯಾಕೆ ಇಷ್ಟೊಂದು ಅವಸರ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಖಾರವಾಗಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಅವರೇನು ಮೈತ್ರಿ ಸರ್ಕಾರ ಬೀಳಿಸುವುದಕ್ಕೆ ಕಾರಣರಾದವರೇ? ಅವರೇನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರೇ ? ಬಾಂಬೆ ಪುಣೆಯಲ್ಲಿ ಸೂಟ್‍ಕೇಸ್ ಹಿಡ್ಕೊಂಡು ಓಡಾಡುತ್ತಿದ್ದವರು. ಅವರನ್ನು ಮಂತ್ರಿ ಮಾಡೋಕೆ ಅಷ್ಟೊಂದು ಅವಸರ ಯಾಕೆ ಬೇಕು ಎಂದು ಕೇಳಿದರು.

ಬಿಜೆಪಿ ಸರ್ಕಾರ ಬರುವುದಕ್ಕೆ ಯೋಗೇಶ್ವರ್ ಪಾತ್ರ ಏನೂ ಇಲ್ಲ. ಅವನ ಪಾತ್ರ ಏನು ಇಲ್ಲದ ಮೇಲೆ ಅವನಿಗ್ಯಾಕೆ ಮಂತ್ರಿ ಸ್ಥಾನ ಕೊಡಬೇಕು. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಉಮೇಶ್ ಕತ್ತಿಯಂತಹ ನಾಯಕರು ಸರತಿಯಲ್ಲಿದ್ದಾರೆ. ಅವರನ್ನು ಮಂತ್ರಿ ಮಾಡಿ. ಇಂತಹ ಆತುರದ ನಿರ್ಧಾರ ತೆಗೆದುಕೊಂಡರೆ ನಿಮ್ಮ ನಾಯಕತ್ವದ ಬಗ್ಗೆ ಅಪನಂಬಿಕೆ ಬರಲಿದೆ. ರಾಜಕಾರಣ ಸಕಾರಾತ್ಮಕ ಧೋರಣೆಯಿಂದ ಸಮಾನವಾಗಿ ಹೋಗಬೇಕು. ನಕಾರಾತ್ಮಕವಾಗಿ ರಾಜಕಾರಣವನ್ನು ಮಾಡಬಾರದು ಎಂದು ತಿಳಿಸಿದರು.

ಬಾಂಬೆ ಟೀಂನಲ್ಲಿ ನಾನು ಒಂಟಿಯಾಗಿಲ್ಲ. ಎಲ್ಲರೂ ಜೊತೆಯಾಗಿದ್ದಾರೆ. ನಾವಿದ್ದೇವೆ ಅಂತ ಬಿಜೆಪಿಯ ಹಿರಿಯ ನಾಯಕರು ಹೇಳಿದ್ದಾರೆ. ಹಾಗಾಗಿ, ನಾನು ಒಂಟಿಯಾಗಿಲ್ಲ. ತಂದೆಯನ್ನು ಕೊಂದವನನ್ನೇ ತಾಯಿ ಮದುವೆ ಆಗಿ ಮೆರವಣಿಗೆ ಹೊರಟಂತಿದೆ. ನಾವು ವಿರೋಧಿಸಿದವರೇ ಈಗ ಅವರ ಸ್ನೇಹಿತರಾಗಿದ್ದಾರೆ ಎಂದು ಸರ್ಕಾರದ ಈಗಿನ ಸ್ಥಿತಿ ಕುರಿತು ವಿಶ್ವನಾಥ್ ಮಾರ್ಮಿಕವಾಗಿ ನುಡಿದರು.

ನಾವು ಯಾರನ್ನು ವಿರೋಧ ಮಾಡಿ ಬಂದಿದ್ದೇವೋ ಅವರೇ ಈಗ ಬಿಎಸ್‍ವೈ ಸ್ನೇಹಿತರಾಗಿದ್ದಾರೆ. ಇದು ತಂದೆಯನ್ನು ಕೊಂದವನನ್ನು ತಾಯಿ ಮದುವೆಯಾದಂತೆ ಕಾಣುತ್ತಿದೆ. ಶೇಕ್ಸ್ ಪೀಯರ್ ನಾಟಕದಲ್ಲಿ ಇದೇ ರೀತಿಯ ಪ್ರಸಂಗ ಇದೆ. ನಮ್ಮ ಪರಿಸ್ಥಿತಿ ಹಾಗೂ ಸರ್ಕಾರದ ಪರಿಸ್ಥಿತಿಯೂ ಹಾಗೇ ಇದೆ. ಪರೋಕ್ಷವಾಗಿ ಕುಮಾರಸ್ವಾಮಿ ಸಖ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಾವು ಸರ್ಕಾರವನ್ನು ಬೀಳಿಸಲಿಲ್ಲ. ಕಾಂಗ್ರೆಸ್ ಜೆಡಿಎಸ್‍ನವರೇ ಬೀಳಿಸಿಕೊಂಡರು. ಸಿದ್ದರಾಮಯ್ಯ, ಕುಮಾರಸ್ವಾಮಿಯೇ ಈ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿದರು.

ನಿನ್ನೆಯ ಮಧ್ಯಂತರ ತೀರ್ಪಿನ ಆದೇಶ ನೋಡಿದ್ದೇನೆ. ಅದರ ತೀರ್ಪಿನ ಆದೇಶ ಪ್ರತಿ ಇನ್ನು ಕೈಸೇರಿಲ್ಲ. ಅದರಲ್ಲಿ ಸಚಿವರಾಗಬಾರದು ಅಂತ ಮಾತ್ರ ಹೇಳಿದ್ದಾರೆ. 2027ರವರೆಗೆ ನನ್ನ ವಿಧಾನ ಪರಿಷತ್ ಸ್ಥಾನಕ್ಕೆ ತೊಂದರೆಯಿಲ್ಲ. ಸರ್ಕಾರದ ರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಮುಂದೆ ನಿಂತಿದ್ದ ಸ್ಥಿತಿಯೇ ಬೇರೆ. ಇಂದಿನ ಬಿ.ಎಸ್.ಯಡಿಯೂರಪ್ಪ ನವರ ನಡವಳಿಕೆಗಳೇ ಬೇರೆ ಎಂದು ಯಡಿಯೂರಪ್ಪ ಅವರ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ರಾಜಕಾರಣದಲ್ಲಿ ಕೃತಜ್ಞತೆ ಕಡಿಮೆ ಆಗುತ್ತಿದೆ. ನಾವು ಮಾಡಿದ ಕೆಲಸವನ್ನು ಯಾರೂ ಕೃತಜ್ಞ ಮಾಡಿಕೊಂಡಿಲ್ಲ. ಯಡಿಯೂರಪ್ಪ ಅವರ ಮೇಲೆಯೇ ಒತ್ತಡ ಇದೆ. ಅದಕ್ಕೆ ಈಗ ಏನಾಗುತ್ತೆ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News