ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ, ತನಿಖೆ ಚುರುಕು

Update: 2020-12-02 13:06 GMT

ಬೆಂಗಳೂರು, ಡಿ.2: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಸಂಬಂಧ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ, ದುಷ್ಕರ್ಮಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ.

ಕೋಲಾರ ಜಿಲ್ಲಾ ಪೊಲೀಸರು ಹಾಗೂ ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ನೇತೃತ್ವದಲ್ಲಿ ವಿಶೇಷ ತಂಡಗಳು ತನಿಖೆ ನಡೆಸುತ್ತಿದ್ದು, ಕೃತ್ಯ ನಡೆದ ಮೂರು ಕಡೆ ಸಿಗಬಹುದಾದ ಸಿಸಿಟಿವಿ ದೃಶ್ಯಗಳು ಹಾಗೂ ಕೆಲ ಸುಳಿವುಗಳನ್ನು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖವಾಗಿ ಇತ್ತೀಚಿಗೆ ವರ್ತೂರು ಪ್ರಕಾಶ್ ಮೊಬೈಲ್‍ಗೆ ಬಂದಿರುವ ಕರೆಗಳ ಸಿಡಿಆರ್ ಪರಿಶೀಲನೆ ಮಾಡುತ್ತಿದ್ದಾರೆ. ಇದಲ್ಲದೆ ಮಾಜಿ ಸಚಿವ ವರ್ತೂರು ಪ್ರಕಾಶ್ ಜೊತೆ ಅಪಹರಣಕ್ಕೆ ಒಳಗಾಗಿ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾರು ಚಾಲಕ ಸುನೀಲ್ ಬಳಿಯೂ ತನಿಖಾ ತಂಡವೊಂದು ಆತನ ಹೇಳಿಕೆ ದಾಖಲಿಸಿಕೊಂಡಿದೆ ಎನ್ನಲಾಗಿದೆ.

ಶಂಕೆ?: ವರ್ತೂರು ಪ್ರಕಾಶ್‍ರನ್ನು ಅಪಹರಿಸಿ ಹಿಂಸೆ ನೀಡಿದ ಪ್ರಕರಣವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ದೂರಿನ ಪ್ರಕಾರ ವರ್ತೂರು ಪ್ರಕಾಶ್ ನಾಲ್ಕು ದಿನಗಳ ಹಿಂದೆ ಅಪಹರಣವಾಗಿದ್ದು ಕುಟುಂಬಸ್ಥರು ನಾಪತ್ತೆ ದೂರನ್ನು ಏಕೆ ನೀಡಿಲ್ಲ ಎಂಬ ಪ್ರಶ್ನೆ ಎದ್ದಿದೆ.

ಸಚಿವರ ಬಳಿ ಅಳಲು: ಅಪಹರಣ ನಡೆದ ಕುರಿತಂತೆ ವರ್ತೂರು ಪ್ರಕಾಶ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವಿವರಣೆ ನೀಡಿ, ಅಳಲು ತೋಡಿಕೊಂಡರು.

ಫಾರ್ಮ್ ಹೌಸ್‍ನಿಂದ ತೆರಳುತ್ತಿದ್ದ ವೇಳೆ ನನ್ನ ಕಾರನ್ನು ಅಡ್ಡಗಟ್ಟಿದ 8 ಮಂದಿ ನನಗೆ ಮಂಕಿ ಕ್ಯಾಪ್ ಹಾಕಿ ಅಪಹರಣಕಾರರ ಗುರುತು ನನಗೆ ಸಿಗಬಾರದೆಂದು ಪ್ರಯತ್ನ ನಡೆಸಿದರು. ಅಪಹರಣ, ಕೊಲೆ ಬೆದರಿಕೆ ಹಾಗೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇನೆ. ತಮಗೆ ಹಾಗೂ ಕುಟುಂಬಸ್ಥರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

ಹಣಕ್ಕಾಗಿಯೇ ಅಪಹರಣ: ವರ್ತೂರ್ ಪ್ರಕಾಶ್

ರಾಜಕೀಯ ಪ್ರೇರಿತವಾಗಿ ಅಪಹರಣ ಮಾಡಿಲ್ಲ. ಬದಲಾಗಿ, ಹಣಕ್ಕಾಗಿಯೇ ಈ ರೀತಿಯ ಕೃತ್ಯ ನಡೆಸಿದ್ದಾರೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ಸಂಜೆ ಕೋಲಾರ ನಗರದಲ್ಲಿ ಒಂದು ಮದುವೆ ಸಮಾರಂಭ ಮುಗಿಸಿ 7 ಗಂಟೆಗೆ ಫಾರಂ ರಸ್ತೆ ಬಿಟ್ಟು ಕಿರಿದಾದ ರಸ್ತೆಯಲ್ಲಿ ಬರುತ್ತಿದ್ದೆ. ಆ ರಸ್ತೆಯಿಂದ ಮಂಕಿಕ್ಯಾಪ್ ಹಾಕಿದ್ದ ಕೆಲವರು ನನ್ನನ್ನು ಹಿಂಬಾಲಿಸಿದರು. ತದನಂತರ, ಏಕಾಏಕಿ ನನ್ನ ಕಾರಿನ ಗಾಜು ಒಡೆದು, ನನಗೂ ಮಂಕಿ ಕ್ಯಾಪ್ ಹಾಕಿ 4 ಗಂಟೆಗಳ ಕಾಲ ಕಾರಿನಲ್ಲಿ ಇಟ್ಟಿದ್ದರು. ತದನಂತರ, 30 ಕೋಟಿ ರೂ. ಹಣ ನೀಡುವಂತೆ ಬೇಡಿಕೆ ಇಟ್ಟು, ತಡರಾತ್ರಿ ಕಾಡಿಗೆ ಕರೆದುಕೊಂಡು ಹೋದರು. ಅಲ್ಲಿ ನನ್ನ ಕೈ-ಕಾಲು ಕಟ್ಟಿಹಾಕಿ ಹಲ್ಲೆ ನಡೆಸಿದರು ಎಂದು ವಿವರಿಸಿದರು.

ಮರುದಿನ ನಿನ್ನ ಗೆಳೆಯರಿಂದ 50 ಲಕ್ಷ ರೂ. ಪಡೆಯುವಂತೆ ಒತ್ತಡಹಾಕಿ, ಮೊಬೈಲ್ ನೀಡಿದರು. ಯಾರದ್ದೇ ಕರೆ ಬಂದರೂ ಅನುಮಾನ ಆಗದಂತೆ ಮಾತನಾಡುವಂತೆ ಬೆದರಿಕೆ ಹಾಕಿದರು. ಜತೆಯಲ್ಲಿದ್ದ ಕಾರು ಚಾಲಕ ಸುನೀಲ್ ಮೇಲೂ ಹಲ್ಲೆ ನಡೆಸಿದರು. ಅದಾದ ಬಳಿಕ ಅವನು ಪ್ರಜ್ಞೆ ತಪ್ಪಿದ. ಇದನ್ನು ಕಂಡ ದುಷ್ಕರ್ಮಿಗಳು ಆತ ಸಾವನ್ನಪ್ಪಿದ್ದಾನೆ ಎಂದು ಭಯಗೊಂಡು ನನ್ನನ್ನು ಹೊಸಕೋಟೆ ಬಳಿ ತಂದು ಬಿಟ್ಟರು.

ನನ್ನ ಮೊಬೈಲ್ ಮೂಲಕ ಗೊತ್ತಾಗಬಹುದೆಂದು ಮೊಬೈಲ್ ಸಂಪರ್ಕ ಕಡಿತಗೊಳಿಸಿದರು. ಕೋಲಾರ ಮಾರ್ಗದ ರಸ್ತೆಯಲ್ಲಿ ಕೆಲವರನ್ನು ಮಾತನಾಡಿಸಿ, ನಾನು ಮಾಜಿ ಸಚಿವ ಎಂದರೆ ನಂಬಲಿಲ್ಲ. ಮಂಕಿ ಕ್ಯಾಪ್ ಬಿಚ್ಚಿದಾಗ ನಂಬಿದರು ಎಂದು ಘಟನೆ ಕುರಿತು ವರ್ತೂರ್ ಪ್ರಕಾಶ್ ಮಾಹಿತಿ ನೀಡಿದರು.

ಪೊಲೀಸ್ ಭದ್ರತೆ

ಅಪಹರಣ ಸಂಬಂಧ ವರ್ತೂರ್ ಪ್ರಕಾಶ್ ಅವರಿಗೆ ಪೊಲೀಸ್ ಭದ್ರತೆ ಒದಗಿಸಲಾಗುವುದು. ಜತೆಗೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ತ್ವರಿತವಾಗಿ ಬಂಧಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News