ಐಎಂಎ ಬಹುಕೋಟಿ ವಂಚನೆ ಪ್ರಕರಣ: ರೋಷನ್ ಬೇಗ್‍ಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ
ಬೆಂಗಳೂರು, ಡಿ.2: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಕೋರ್ಟ್ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದ್ದು ಆರೋಪಿ ರೋಷನ್ ಬೇಗ್ ಅವರನ್ನು ವಶಕ್ಕೆ ನೀಡುವಂತೆ ಕೋರಿ ಸಿಬಿಐ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ಕೋರ್ಟ್ ಡಿ.1ರಂದು ವಶಕ್ಕೆ ನೀಡಿತ್ತು. ಡಿ.2ರಂದು ವಿಚಾರಣೆ ನಡೆಸಿದ ಅಧಿಕಾರಿಗಳು ಸಂಜೆ 5 ಗಂಟೆ ಸುಮಾರಿಗೆ ನ್ಯಾಯಾಲಯದ ಎದುರು ಹಾಜರುಪಡಿಸಿದರು. ಬಳಿಕ ಕೋರ್ಟ್ ಆರೋಪಿ ರೋಷನ್ ಬೇಗ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು.
ಇನ್ನು ರೋಷನ್ ಬೇಗ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಡಿ.4ಕ್ಕೆ ನಡೆಯಲಿದೆ. ಅಷ್ಟರೊಳಗೆ ಸಿಬಿಐ ಪರ ವಕೀಲರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕಿದೆ. ಒಂದು ವೇಳೆ ಡಿ.4ರಂದು ಜಾಮೀನು ಸಿಗದಿದ್ದರೆ ರೋಷನ್ ಬೇಗ್ ಮತ್ತಷ್ಟು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲೇ ವಾಸ ಮುಂದುವರಿಸಬೇಕಾಗುತ್ತದೆ.
ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್‍ನಿಂದ ರೋಷನ್ ಬೇಗ್ ಅಕ್ರಮವಾಗಿ ಹಣ ಪಡೆದ ಆರೋಪದಡಿ ಸಿಬಿಐ ಅಧಿಕಾರಿಗಳು ನ.22ರಂದು ಬಂಧಿಸಿದ್ದರು. ಆ ಬಳಿಕ ಅನಾರೋಗ್ಯಕ್ಕೆ ಚಿಕಿತ್ಸೆ ಬೇಕೆಂದು ಆಸ್ಪತ್ರೆ ಸೇರಿದ್ದ ಬೇಗ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಡಿ.1ರಂದು ಸಿಬಿಐ ವಶಕ್ಕೆ ಪಡೆದಿತ್ತು.