ವಿಶ್ವನಾಥ್ ಗೆ ಮುಳುವಾಗುತ್ತಾ 'ದೊಡ್ಡ ಮೊತ್ತ'ದ ಹೇಳಿಕೆ ?: ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಪಟ್ಟು
ಬೆಂಗಳೂರು, ಡಿ.2: ‘ಹುಣಸೂರು ಉಪಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಅವರಿಗೆ ಪಕ್ಷದಿಂದ ದೊಡ್ಡ ಮೊತ್ತ ನೀಡಲಾಗಿತ್ತು ಎಂಬ ವಿಚಾರವನ್ನು ಸ್ವತಃ ವಿಶ್ವನಾಥ್ ಅವರೇ ಒಪ್ಪಿಕೊಂಡಿದ್ದು, ಅವರು ಹೇಳಿರುವ ದೊಡ್ಡ ಮೊತ್ತ ಎಂದರೆ ಎಷ್ಟು? ಅದು ಬಿಳಿ ಹಣವಾ? ಅಥವಾ ಕಪ್ಪು ಹಣವಾ? ಎಂದು ಪ್ರಶ್ನಿಸಿರುವ ರಾಜ್ಯ ಕಾಂಗ್ರೆಸ್, ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್.ಶಂಕರ್, ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿದರು.
‘ಆಪರೇಷನ್ ಕಮಲದ ಪರಿಣಾಮ 17 ಶಾಸಕರ ರಾಜೀನಾಮೆ ನೀಡಿದಾಗ ಮೊದಲಿಗೆ 15 ಕ್ಷೇತ್ರಗಳ ಉಪಚುನಾವಣೆ ನಡೆಯಿತು. ಈ ವೇಳೆ ಅವರಿಗೆ ಮಂತ್ರಿ ಸ್ಥಾನದ ಆಮಿಷದ ಜತೆಗೆ ದೊಡ್ಡ ಮೊತ್ತದ ಲಂಚದ ಹಣ ನೀಡಲಾಗಿದೆ ಎಂಬುದು ಜಗಜ್ಜಾಹೀರು ಆಗಿರುವ ವಿಚಾರ. ನಾವು ಕೂಡ ಉಪಚುನಾವಣೆಯಲ್ಲಿ ಬಿಜೆಪಿ 50 ಕೋಟಿ ರುಪಾಯಿಗೂ ಹೆಚ್ಚು ಹಣ ವೆಚ್ಚ ಮಾಡಿದೆ, ಚುನಾವಣೆ ವೇಳೆ ಹಣದ ಹೊಳೆ ಹರಿದಿದೆ ಎಂದು ಹೇಳಿದ್ದೆವು. ಆದರೆ ಅದನ್ನು ಬಿಜೆಪಿಯವರು ನಿರಾಕರಿಸಿದ್ದರು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
‘ನಾನು ಚುನಾವಣೆಗೆ ನಿಂತಾಗ ಪಕ್ಷದಿಂದ ಬರಬೇಕಾದ ದೊಡ್ಡ ಮೊತ್ತ ನನ್ನ ಕೈ ಸೇರಲಿಲ್ಲ. ಪಕ್ಷ ಕೊಟ್ಟ ಈ ದೊಡ್ಡ ಮೊತ್ತವನ್ನು ಸಿ.ಪಿ ಯೋಗೇಶ್ವರ್ ಹಾಗೂ ಸಂತೋಷ್ ಅವರು ನನಗೆ ತಲುಪಿಸದೇ ದುರ್ಬಳಕೆ ಮಾಡಿಕೊಂಡಿದ್ದು, ನಾನು ಚುನಾವಣೆಯಲ್ಲಿ ಸೋಲುವಂತೆ ಪಿತೂರಿ ಮಾಡಿದ್ದಾರೆ ಎಂದು ವಿಶ್ವನಾಥ್ ಅವರು ಹೇಳಿದ್ದಾರೆ. ವಿಶ್ವನಾಥ್ ಅವರ ಈ ಹೇಳಿಕೆ ತಪ್ಪೊಪ್ಪಿಗೆ ಹೇಳಿಕೆಯಾಗಿದೆ ಎಂದು ಉಗ್ರಪ್ಪ ತಿಳಿಸಿದರು.
ಈ ದೊಡ್ಡ ಮೊತ್ತ ಎಂದರೆ ಎಷ್ಟು? ಅದು 10 ಕೋಟಿಯಾ? 25 ಕೋಟಿಯಾ? ಇದನ್ನು ಸ್ಪಷ್ಟಪಡಿಸಬೇಕು. ಈ ಹಣದ ಮೂಲ ಏನು? ಈ ಹಣವನ್ನು ಯಾರಾದರೂ ದೇಣಿಗೆ ರೂಪದಲ್ಲಿ ಕೊಟ್ಟಿದ್ದಾರಾ? ಅಥವಾ ಬಿಡಿಎ ಹಗರಣದಲ್ಲಿ ಆರ್‍ಟಿಜಿಎಸ್ ಮೂಲಕ ಬಂದ ಭ್ರಷ್ಟ ಹಣವನ್ನು ಕೊಟ್ಟರಾ? ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿ ಜನರಿಗೆ ತಿಳಿಸಬೇಕು ಎಂದು ಅವರು ಆಗ್ರಹಿಸಿದರು.
‘ಈ ದೇಶದಲ್ಲಿ ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐ ಜೀವಂತವಾಗಿದ್ದರೆ, ವಿಶ್ವನಾಥ್ ಹೇಳಿಕೆ ಆಧಾರದ ಮೇಲೆ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆ ಸಂಸ್ಥೆಗಳನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಬರಬೇಕಿದ್ದರೆ, ಈ ಪ್ರಕರಣವನ್ನು ಕೂಡಲೇ ಹೈಕೋರ್ಟಿನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು.’ ಎಂದು ಅವರು ಆಗ್ರಹಿಸಿದರು.
‘ಕಳೆದ ಒಂದು ತಿಂಗಳ ಅವಧಿಯಿಂದ ಮುಖ್ಯಮಂತ್ರಿ ಹಾಗೂ ಅವರ ಕಚೇರಿ ಗುರಿಯಾಗಿಸಿ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಬಿಜೆಪಿ ಆಂತರಿಕ ವಿಚಾರ ಬೇರೆ. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಮೊದಲು ಸಿಎಂ ಕಾರ್ಯದರ್ಶಿ ಹಠಾತ್ ವಜಾಗೊಳ್ಳುತ್ತಾರೆ, ನಂತರ ಕೆಲ ದಿನಗಳ ಹಿಂದೆ ಮಾಧ್ಯಮ ಕಾರ್ಯದರ್ಶಿ ರಾಜೀನಾಮೆ ನೀಡುತ್ತಾರೆ. ನಂತರ ಮುಖ್ಯಮಂತ್ರಿಯ ರಾಜಕೀಯ ಸಲಹೆಗಾರ ಮಾತ್ರೆ ಸೇವಿಸಿ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಬಿ.ಎಲ್.ಶಂಕರ್ ಹೇಳಿದರು.
ಎಚ್.ವಿಶ್ವನಾಥ್ ಅವರು ‘ಶಾಸಕರು ಹಾಗೂ ಮುಖ್ಯಮಂತ್ರಿಗಳ ಸಲಗೆಗಾರರು ನನಗೆ ಹಣ ತಲುಪಿಸಲಿಲ್ಲ. ಆ ಮೂಲಕ ನನ್ನ ಸೋಲಿಗೆ ಸಂಚು ನಡೆಸಿದರು. ಇನ್ನು ಹೈಕೋರ್ಟ್‍ನಲ್ಲಿ ನನ್ನ ಪರ ವಾದ ಮಾಡಲು ಅಡ್ವಕೇಟ್ ಜನರಲ್ ಅವರು ನನಗೆ ಸರಿಯಾದ ಸಹಕಾರ ನೀಡಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ವಿಶ್ವನಾಥ್ ಅವರೂ ಸೇರಿದಂತೆ, ಅವರು ಆರೋಪಿಸಿರುವ ಶಾಸಕರಾಗಲಿ, ರಾಜಕೀಯ ಸಲಹೆಗಾರರಾಗಲಿ, ಅಡ್ವಕೇಟ್ ಜನರಲ್ ಆಗಲಿ ಇವರೆಲ್ಲರೂ ಸಾರ್ವಜನಿಕ ಸೇವೆಯಲ್ಲಿರುವವರು. ಹೀಗಾಗಿ ಸಿಎಂ ಹಾಗೂ ಅವರ ಆಪ್ತ ವಲಯದವರಿಗೆ ಸಂಬಂಧಿಸಿದಂತೆ ನಡೆದಿರುವ ಈ ಬೆಳವಣಿಗೆಗಳ ಕುರಿತು ಸಾರ್ವಜನಿಕರಿಗೆ ಸತ್ಯಾಂಶ ತಲುಪಬೇಕಿದೆ ಎಂದು ಅವರು ತಿಳಿಸಿದರು.
ಜಿ.ಟಿ ದೇವೇಗೌಡ ಅವರಿಗೆ ಹಣ ನೀಡಲಾಗಿತ್ತು ಎಂಬ ವಿಚಾರವಾಗಿ ಸಿದ್ದರಾಮಯ್ಯನವರು ಪಕ್ಷದ ಸಭೆಯಲ್ಲಿ ತಿಳಿಸಿದ್ದರು ಎಂಬ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಚ್.ಎಂ.ರೇವಣ್ಣ, ‘ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಜಿ.ಟಿ ದೇವೇಗೌಡರಿಗೆ ಹಣ ನೀಡಲಾಗಿದೆ ಎಂಬ ವಿಚಾರವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿಯೇ ಇಲ್ಲ. ನಾನು ಉಗ್ರಪ್ಪ ಅದೇ ಸಭೆಯಲ್ಲಿ ಇದ್ದೆವು. ಸಿದ್ದರಾಮಯ್ಯ ಆ ವಿಚಾರವನ್ನು ಪ್ರಸ್ತಾಪಿಸಿಯೇ ಇಲ್ಲ’ ಎಂದರು.
‘ಇನ್ನು ಕುರುಬರನ್ನು ಎಸ್‍ಟಿಗೆ ಸೇರಿಸುವ ವಿಚಾರವಾಗಿ ಹಾಗೂ ಇದರಲ್ಲಿ ಆರೆಸೆಸ್ಸ್ ಕೈವಾಡದ ಕುರಿತಾಗಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ನಾನು ಪ್ರತ್ಯೇಕವಾಗಿ ಮಾತನಾಡುತ್ತೇನೆ’ ಎಂದು ರೇವಣ್ಣ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಎಂ.ರಾಮಚಂದ್ರಪ್ಪ ಉಪಸ್ಥಿತರಿದ್ದರು.