×
Ad

ಹೆಚ್‌ಡಿಕೆ ಭೂ ಹಗರಣವನ್ನು ದಾಖಲೆ ಸಹಿತ ಬಯಲಿಗೆಳೆಯುತ್ತೇನೆ ಎಂದ ಎಸ್.ಆರ್.ಹಿರೇಮಠ

Update: 2020-12-02 20:00 IST

ರಾಯಚೂರು, ಡಿ.2: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ರಾಮನಗರದ ಕೇತಗಾನಹಳ್ಳಿ ಗೋಮಾಳ ಜಮೀನು ಕಬಳಿಕೆ ಹಗರಣವನ್ನು ಡಿಸೆಂಬರ್ ಅಂತ್ಯದೊಳಗೆ ದಾಖಲೆ ಸಹಿತ ಬಯಲಿಗೆಳೆಯುವೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ ಹೇಳಿದ್ದಾರೆ.

ಬುಧವಾರ ರಾಯಚೂರು ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಮನಗರದ ಕೇತಗಾನಹಳ್ಳಿ ಗ್ರಾಮದಲ್ಲಿ ಎಸ್ಸಿ ಜನಾಂಗಕ್ಕೆ ಸೇರಿದ್ದ ನೂರಾರು ಎಕರೆ ಜಮೀನನ್ನು ಎಚ್‍ಡಿಕೆ ಅವರು ಕಬಳಿಕೆ ಮಾಡಿದ್ದಾರೆ. ಇದಾಗಲೇ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಯೂ ಆಗಿದ್ದು, ಶೀಘ್ರದಲ್ಲೇ ಹಗರಣವನ್ನು ತಾತ್ವಿಕ ಹಂತಕ್ಕೆ ಒಯ್ಯುತ್ತೇವೆ ಎಂದು ತಿಳಿಸಿದರು.

ಎಚ್‍ಡಿಕೆ ವಿರುದ್ಧದ ಭೂ ಕಬಳಿಕೆ ಹಗರಣ ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಕೂಡ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ. ಆದರೆ, ಯಾವುದೇ ಸರಕಾರಗಳೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ, ಈ ವಿಚಾರವನ್ನು ನಾನು ಸುಮ್ಮನೇ ಬಿಡುವುದಿಲ್ಲ. ಅಂತ್ಯ ಕಾಣಿಸುತ್ತೇನೆ ಎಂದು ಹೇಳಿದರು.

ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸರಕಾರ ದುಡಿಯುವ ಜನರ ಪರವಾಗಿ ಕೆಲಸ ಮಾಡಬೇಕು. ಶ್ರೀಮಂತರ ಪರವಾಗಿ ಕಾನೂನು ಮಾಡುವುದನ್ನು ಬಿಡಬೇಕು. ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟಿರುವ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು ಎಂದರು.

ಕಾಫಿ ಡೇ ವಿಚಾರವಾಗಿ ಮಾತನಾಡಿದ ಎಸ್.ಆರ್.ಹಿರೇಮಠ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕ್ರಿಮಿನಲ್ಸ್ ಗಳನ್ನು ಬೆಳೆಸಿದ್ದಾರೆ. ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು. ಕೃಷ್ಣ ತಮ್ಮ ಅಪರಾಧಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸೇರಿರಬಹುದು. ಹೊರಗೆ ಬಂದು ಕಾಫಿ ಡೇ ನಲ್ಲಿ ಏನೆಲ್ಲಾ ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು ಎಸ್.ಎಂ.ಕೃಷ್ಣ ಅವರೇ ಹೇಳಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News