ರಾಜ್ಯದಲ್ಲಿ ಜನವರಿ-ಫೆಬ್ರವರಿಯಲ್ಲಿ ಕೊರೋನ ಎರಡನೆ ಅಲೆ ಆರಂಭ ಸಾಧ್ಯತೆ

Update: 2020-12-02 15:59 GMT

ಬೆಂಗಳೂರು, ಡಿ.2: 2021ನೆ ಸಾಲಿನ ಜನವರಿ-ಫೆಬ್ರವರಿಯಲ್ಲಿ ರಾಜ್ಯದಲ್ಲಿ ಕೊರೋನ ಸಾಂಕ್ರಾಮಿಕದ ಎರಡನೆ ಅಲೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ಕೋವಿಡ್-19ಗೆ ಸಂಬಂಧಿಸಿದ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದೆ.

ಜನವರಿ ಮೊದಲನೆ ವಾರದಲ್ಲೆ ಈ ಪರಿಸ್ಥಿತಿಯನ್ನು ಎದುರಿಸಲು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಐಸಿಯುಗಳು, ವೆಂಟಿಲೇಟರ್ ಗಳನ್ನು ಸರ್ವಸನ್ನದ್ಧವಾಗಿರಿಸಬೇಕು. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ಸಮಾರಂಭಗಳನ್ನು ರದ್ದುಪಡಿಸಬೇಕು. ಡಿಸೆಂಬರ್ 26 ರಿಂದ ಜನವರಿ 1ರವರೆಗೆ (ರಾತ್ರಿ 8 ಗಂಟೆಯಿಂದ ಬೆಳಗ್ಗೆ 5ರವರೆಗೆ) ರಾತ್ರಿ ಕರ್ಫ್ಯೂ ವಿಧಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಂತಹ ಆಚರಣೆಗಳು, ಧಾರ್ಮಿಕ ಸಭೆ ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಬೇಕು. ಮದುವೆ ಸಮಾರಂಭದಲ್ಲಿ 100, ರಾಜಕೀಯ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 200, ಪುಣ್ಯ ತಿಥಿಯಲ್ಲಿ 50, ಅಂತ್ಯ ಸಂಸ್ಕಾರದಲ್ಲಿ 20 ಜನರಿಗೆ ಮಾತ್ರ ಅವಕಾಶ ನೀಡಬೇಕು.

ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆ, ಬಸ್ ನಿಲ್ದಾಣಗಳು, ವಾಣಿಜ್ಯ ಪ್ರದೇಶಗಳು, ಟ್ರಾಫಿಕ್ ಜಂಕ್ಷನ್‍ಗಳಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಷಲ್‍ಗಳು, ಪೊಲೀಸರನ್ನು ನಿಯೋಜಿಸಬೇಕು. ಅಲ್ಲದೆ, ಮಧ್ಯಪ್ರದೇಶದಲ್ಲಿ ಮಾಸ್ಕ್ ಧರಿಸದಿರುವವರಿಗೆ ಕೆಲವು ಗಂಟೆಗಳ ಕಾಲ ಜೈಲು ಶಿಕ್ಷೆ ವಿಧಿಸುತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.

ಫೆಬ್ರವರಿ ಅಂತ್ಯದವರೆಗೂ ಪ್ರತಿದಿನ 1.25 ಲಕ್ಷ ಪರೀಕ್ಷೆಗಳನ್ನು ನಡೆಸಬೇಕು. ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರಿಗೂ ಆರ್‍ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಬೇಕು. ಡಿಸೆಂಬರ್ ಕೊನೆಯ ವಾರದವರೆಗಿನ ಪರಿಸ್ಥಿತಿಯನ್ನು ಆಧರಿಸಿ, ಶಾಲಾ, ಕಾಲೇಜುಗಳನ್ನು ತೆರೆಯುವ ಸಂಬಂಧ ನಿರ್ಧಾರ ಕೈಗೊಳ್ಳಬೇಕು.

ಕೋವಿಡ್-19 ಲಸಿಕೆ ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಸಾಬೂನಿನಿಂದ ಕೈ ತೊಳೆಯುವುದರ ಕುರಿತು ಜನಪ್ರಿಯ ಸಿನಿಮಾ ತಾರೆಯರು, ಕ್ರೀಡಾಪಟುಗಳ ಮೂಲಕ ಜಾಗೃತಿ ಸಂದೇಶಗಳನ್ನು ಕೊಡಿಸಬೇಕು. ಈಜುಕೊಳ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಫೆಬ್ರವರಿವರೆಗೆ ಅವಕಾಶ ನೀಡಬಾರದು. ದೇಶದ ಇತರ ರಾಜ್ಯಗಳಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ಉತ್ತಮ ಪ್ರಯತ್ನಗಳ ಬಗ್ಗೆಯೂ ಅವಲೋಕನ ನಡೆಸಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.

ರಾತ್ರಿ ಕರ್ಫ್ಯೂ ನಿರ್ಧರಿಸಿಲ್ಲ: ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ನೀಡಿರುವ ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರದ ಮಟ್ಟದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ರಾತ್ರಿ ಕಫ್ರ್ಯೂ ವಿಧಿಸುವ ಸಂಬಂಧ ಸದ್ಯಕ್ಕೆ ಯಾವುದೆ ನಿರ್ಧಾರ ಕೈಗೊಂಡಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಯುಎಸ್‍ಎ, ಯುರೋಪ್, ಆಸ್ಟ್ರೇಲಿಯ ಹಾಗೂ ಇತರ ದೇಶಗಳಲ್ಲಿ ಕೋವಿಡ್-19 ಎರಡನೆ ಅಲೆ ಆರಂಭವಾಗಿದೆ. ಇತ್ತೀಚೆಗೆ ನಮ್ಮ ದೇಶದ ದಿಲ್ಲಿ, ಹರಿಯಾಣ, ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಕೇರಳ ಹಾಗೂ ಇತರ ರಾಜ್ಯಗಳಲ್ಲಿಯೂ ಪ್ರಕರಣಗಳು ಹೆಚ್ಚಳವಾಗಿರುವುದನ್ನು ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News