ಭಾವನೆ, ಸಲಹೆಗಳನ್ನು ಹಂಚಿಕೊಳ್ಳಲು ಅವಕಾಶ ಕೊಡಿ: ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ಸುನೀಲ್ ಕುಮಾರ್ ಪತ್ರ

Update: 2020-12-02 16:39 GMT

ಬೆಂಗಳೂರು, ಡಿ.2: ಸರಕಾರದ ಬೆಳವಣಿಗೆ, ನಿರ್ಧಾರ ಮತ್ತು ಪಕ್ಷದಲ್ಲಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನನ್ನ ಭಾವನೆಗಳು ಹಾಗೂ ಸಲಹೆಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ವಿಧಾನಸಭೆಯ ಸರಕಾರಿ ಮುಖ್ಯಸಚೇತಕ ವಿ.ಸುನೀಲ್‍ ಕುಮಾರ್ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ ಕುಮಾರ್ ಕಟೀಲ್‍ಗೆ ಪತ್ರ ಬರೆದಿದ್ದಾರೆ.

ಪಕ್ಷದ ಬೆಳವಣಿಗೆ ದೃಷ್ಟಿಯಲ್ಲಿ ತಾವು ರಾಜ್ಯ ಪ್ರವಾಸ ಮಾಡುತ್ತಿರುವುದು ಎಲ್ಲರಲ್ಲಿಯೂ ಉತ್ಸಾಹ ತಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಮಂತ್ರಿಗಳು, ಕೆಲವು ಶಾಸಕರು ಹಾಗೂ ಪ್ರಮುಖರ ಬಹಿರಂಗ ಹೇಳಿಕೆಗಳು ಸಮಾಧಾನ ತರುವಂತದಲ್ಲ. ಒಂದು ಸಿದ್ಧಾಂತದ ಅಡಿಯಲ್ಲಿ ಕೆಲಸವನ್ನು ಮಾಡುತ್ತಿರುವ ಶಿಸ್ತಿಗೆ, ಸ್ವಯಂ ಅನುಶಾಸನಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರ, ಹಿತೈಷಿಗಳ ಮನಸ್ಸಿಗೆ ಈ ಹೇಳಿಕೆಗಳು ನೋವುಂಟು ಮಾಡಿವೆ.

ಮೂಲ-ಹೊಸಬರು ಎಂಬ ಭಾವನೆಯನ್ನು ವ್ಯಕ್ತ ಮಾಡದೇ ಪಕ್ಷದ ಶಿಸ್ತಿನ ಚೌಕಟ್ಟನ್ನು ಎಲ್ಲರಿಗೂ ಗಟ್ಟಿಯಾಗಿ ಹೇಳಬೇಕಾಗಿದೆ. ನಿಗಮ ಮಂಡಳಿಗಳ ನೇಮಕ, ಮಂತ್ರಿ ಮಂಡಲದ ರಚನೆ ಕುರಿತಂತೆ ಪಕ್ಷದ ಚೌಕಟ್ಟಿನಲ್ಲಿ ಅಭಿಪ್ರಾಯಗಳನ್ನು ಶಾಸಕರು ಹಂಚಿಕೊಳ್ಳಬೇಕಾಗಿದೆ. ನಮ್ಮ ಭಾವನೆಗಳು ಹಾಗೂ ಸಲಹೆಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಬೇಕಾಗಿದೆ. ನಾವು ನೀಡುವ ಸಲಹೆಗಳು ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಮತ್ತು ಆಡಳಿತವನ್ನು ಪರಿಣಾಮಕಾರಿಯಾಗಿ ನಡೆಸಲು ಸಹಕಾರಿಯಾಗುತ್ತದೆ.

ಆದುದರಿಂದಾಗಿ ಕೂಡಲೇ ಎಲ್ಲ ಶಾಸಕರ ಸಭೆಯನ್ನು ಕರೆದು ನಮ್ಮ ಭಾವನೆಗಳನ್ನು ವ್ಯಕ್ತ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಕಟೀಲ್‍ಗೆ ಬರೆದಿರುವಂತಹ ಪತ್ರದಲ್ಲಿ ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News