ಪುತ್ತೂರಿನಿಂದ ಬೆಂಗಳೂರಿಗೆ 4.15 ಗಂಟೆಯಲ್ಲಿ ರೋಗಿಯ ರವಾನೆ: ಸಾರ್ವಜನಿಕರಿಂದ ಶ್ಲಾಘನೆ

Update: 2020-12-02 17:07 GMT

ಬೆಂಗಳೂರು, ಡಿ.2: ಶ್ವಾಸಕೋಶದ ಸಂಬಂಧಿ ಲಂಗ್ಸ್ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆಗಾಗಿ ಸುಹಾನ ಎಂಬುವವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಬೆಂಗಳೂರಿನ ಕೆ.ಆರ್.ಪುರಂ ಬಳಿಯಿರುವ ವೈದೇಹಿ ಆಸ್ಪತ್ರೆಗೆ ಝೀರೋ ಟ್ರಾಫಿಕ್ ಮೂಲಕ 4 ಗಂಟೆ 15 ನಿಮಿಷದಲ್ಲಿ ತಲುಪುವ ಮೂಲಕ ಆಂಬ್ಯುಲೆನ್ಸ್ ಚಾಲಕ ಹನೀಫ್ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 22 ವರ್ಷದ ಸುಹಾನ ಎಂಬುವವರು ಚಿಂತಾಜನಕ ಸ್ಥಿತಿಗೆ ತಲುಪಿದ್ದರು. ಇದರಿಂದ ತುರ್ತುಚಿಕಿತ್ಸೆಗಾಗಿ ಬೆಂಗಳೂರಿಗೆ ವರ್ಗಾಯಿಸಬೇಕು ಎಂದು ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಎಐಕೆಎಂಸಿಸಿ ಮಂಗಳೂರು ಘಟಕ ಸಹಕಾರ ನೀಡಿತ್ತು. ಕೆಎಂಸಿಸಿಯ ಆಂಬ್ಯುಲೆನ್ಸ್ ಚಾಲಕ ಶರವೇಗದಲ್ಲಿ ಬೆಂಗಳೂರು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು ಮೂಲದ ಕಾರುಣ್ಯ ನಿಧಿ ತಂಡದವರು ಮಂಗಳವಾರ ರಾತ್ರಿ ನಮ್ಮನ್ನು ಭೇಟಿ ಮಾಡಿ ವಿಷಯ ಮುಟ್ಟಿಸಿದ್ದರು. ನಾವು ಕೂಡಲೇ ಕಾರ್ಯಪ್ರವೃತ್ತರಾಗಿ ಸಂಘಟನೆಯವರ ಅಭಿಪ್ರಾಯ ಪಡೆದು ಆಂಬ್ಯುಲೆನ್ಸ್ ಅನ್ನು ಪುತ್ತೂರಿಗೆ ಕಳುಹಿಸಿಕೊಟ್ಟೆವು. ಪುತ್ತೂರಿನಿಂದ 11.15 ಹೊರಟು ಬೆಂಗಳೂರಿಗೆ 3.20 ಕ್ಕೆ ತಲುಪಿದೆವು. ಪುತ್ತೂರಿನಿಂದ ದಕ್ಷಿಣ ಕನ್ನಡದ ಎಸ್.ಪಿ ಸೇರಿದಂತೆ ದಾರಿಯುದ್ದಕ್ಕೂ ಪೊಲೀಸರು ಹಾಗೂ ಸಾರ್ವಜನಿಕರು ವ್ಯಾಪಕವಾಗಿ ಈ ಕಾರ್ಯಕ್ಕೆ ಬೆಂಬಲ ನೀಡಿದರು. ಒಂದೆರಡು ಕಡೆಗಳಲ್ಲಿ ಸ್ವಲ್ಪಮಟ್ಟಿಗೆ ತೊಡಕುಂಟಾದರೂ, ಯಾವುದೇ ಗೊಂದಲಕ್ಕೊಳಗಾಗದೇ ನಾವು ಬೆಂಗಳೂರು ತಲುಪಿದ್ದೇವೆ. ಬೆಂಗಳೂರು ನಗರದಲ್ಲಿ ನಗರ ಪೊಲೀಸ್, ಟ್ರಾಫಿಕ್ ಪೊಲೀಸ್‍ರಿಗೆ ಮಾಹಿತಿ ನೀಡಿದ್ದರಿಂದ ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ. ಅವರಿಗೆ ಕೃತಜ್ಞರಾಗಿರುತ್ತೇವೆ ಎಂದು ಎಐಕೆಎಂಸಿಸಿ ಉಸ್ತುವಾರಿ ಸಯ್ಯದ್ ಅಫ್ಹಾಂ ತಂಙಳ್ ಪುತ್ತೂರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News