ಲಂಚಕ್ಕೆ ಬೇಡಿಕೆ ಆರೋಪ: ಸಹಾಯಕ ಕಾರ್ಮಿಕ ಆಯುಕ್ತ ಸೇರಿ ಇಬ್ಬರು ಎಸಿಬಿ ಬಲೆಗೆ

Update: 2020-12-02 17:13 GMT

ಬೆಂಗಳೂರು, ಡಿ.2: ತಾತ್ಕಾಲಿಕ ಕಾರ್ಮಿಕರನ್ನು ನೇಮಕಾತಿಗೆ ಅನುಮತಿ ನೀಡುವ ಸಲುವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಸಂಬಂಧ ಸಹಾಯಕ ಕಾರ್ಮಿಕ ಆಯುಕ್ತ ಹಾಗೂ ಕಾರ್ಮಿಕ‌‌ ಇಲಾಖೆಯ ನಿವೃತ್ತ ಇನ್ಸ್​ಪೆಕ್ಟರ್​ ನನ್ನು ಎಸಿಬಿ ಅಧಿಕಾರಿಗಳು ಬಂಧಿಸಿ, 10.5 ಲಕ್ಷ ರೂ. ನಗದು‌ ಜಪ್ತಿ ಮಾಡಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನಿವಾಸಿಯೊಬ್ಬರು ಮಾಲೂರು ಖಾಸಗಿ ಸಂಸ್ಥೆಯ ಬ್ರಾಂಚ್‍ನಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಇವರು ಕೆಲಸ ನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಗೆ ದಿನಗೂಲಿ ಕಾರ್ಮಿಕರ ಅವಶ್ಯಕತೆ ಇದ್ದುದರಿಂದ ತಾತ್ಕಾಲಿಕವಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಪರವಾನಿಗೆ ನೀಡುವಂತೆ ನಗರದ ಬನ್ನೇರುಘಟ್ಟ ರಸ್ತೆಯ ಕಾರ್ಮಿಕರ ಭವನದಲ್ಲಿ ಅರ್ಜಿ ಸಲ್ಲಿಸಿದ್ದರು. 

ಇದಕ್ಕೆ ಅನುಮತಿ ನೀಡಲು ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಹಿಪ್ಪರಗಿ 2 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮಾತುಕತೆ ಬಳಿಕ 1.8 ಲಕ್ಷ ಲಂಚದ ಹಣವನ್ನು ಸಹಾಯಕ ಕಾರ್ಮಿಕ ಆಯುಕ್ತ ಸಂತೋಷ್ ಪರವಾಗಿ ಕಾರ್ಮಿಕ‌‌ ಇಲಾಖೆಯ ನಿವೃತ್ತ ಇನ್ಸ್​ಪೆಕ್ಟರ್​ ಶಿವಕುಮಾರ್ ಸ್ವೀಕರಿಸುತ್ತಿದ್ದ ಎಂದು ತಿಳಿದುಬಂದಿದೆ.

ಈ ಸಂಬಂಧ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಪ್ರಕರಣ ಬೇಧಿಸಿದ್ದಾರೆ. ಅದೇ ರೀತಿ, ಬುಧವಾರ ರಾತ್ರಿ ಇಲ್ಲಿನ ಆರ್ ಪಿಸಿ ಲೇಔಟ್ ನಲ್ಲಿ ಸಂತೋಷ್ ಮನೆ ಮೇಲೆ ದಾಳಿ ನಡೆಸಿ 10.5 ಲಕ್ಷ ರೂ. ಜಪ್ತಿ ಮಾಡಿ, ತನಿಖೆ ಮುಂದುವರಿಸಲಾಗಿದೆ ಎಂದು ಎಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News