ಮನೆ ದಾರಿಗೆ ಅಡ್ಡಲಾಗಿ ಕಾಂಪೌಂಡ್: ಸಂತ್ರಸ್ತ ಕುಟಂಬದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

Update: 2020-12-02 17:37 GMT

ಶಿವಮೊಗ್ಗ, ಡಿ.2: ಮನೆ ದಾರಿಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ ಮಾಡಿರುವುದರಿಂದ ಮನೆಗೆ ಹೋಗಲು ದಾರಿಯಿಲ್ಲದೇ ಕುಟುಂಬವೊಂದು ಬೀದಿಗೆ ಬಿದ್ದಿದೆ ಎಂಬ ಆರೋಪ ಕೇಳಿಬಂದಿದೆ.

ನವೆಂಬರ್ 23ರಿಂದ ಮನೆಗೆ ಹೋಗಲು ಸಾಧ್ಯವಾಗದೇ ಬಸ್ ನಿಲ್ದಾಣದಲ್ಲೇ ಆಶ್ರಯ ಪಡೆದುಕೊಂಡಿರುವ ಬಡ ಕುಟುಂಬದವರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗುರುಪುರ ಇಂದಿರಾ ಬಡಾವಣೆಯ ಸಾಕಮ್ಮ ಕುಟುಂಬದವರು ಧರಣಿ ಕುಳಿತಿದ್ದಾರೆ. ಇವರ ಮನೆ ಇರುವ ನಿದಿಗೆ ಹೋಬಳಿ ಇಸ್ಲಾಪುರ ಗ್ರಾಮದ ಸ.ನಂ.29ರಲ್ಲಿ 30x30 ಅಡಿ ನಿವೇಶನ ಸ್ವಾಧೀನ ಹೊಂದಿದ್ದು ಸುಮಾರು ವರ್ಷಗಳಿಂದ ವಾಸವಾಗಿದ್ದಾರೆ. ಅಲ್ಲದೇ ತಹಶೀಲ್ದಾರ್ ಕಚೇರಿಯಿಂದ ಕರ್ನಾಟಕ ಭೂಕಂದಾಯ ಕಾಯ್ದೆ ನಿಗಮದ ಅನ್ವಯ ಹಕ್ಕುಪತ್ರವನ್ನೂ ನೀಡಲಾಗಿದೆ ಎಂದು ತಿಳಿಸಿದರು.

ಆದರೆ ನ.22 ರಂದು ಮನೆಗೆ ಹೋಗುವ ದಾರಿಗೆ ಅಡ್ಡಲಾಗಿ ಬೇರೆಯವರು ಕಾಂಪೌಂಡ್ ನಿರ್ಮಿಸಿದ್ದಾರೆ. 25 ವರ್ಷಗಳಿಂದ ವಾಸವಾಗಿರುವ ತಮಗೆ ಮನೆಗೆ ಹೋಗಲು ದಾರಿಯಿಲ್ಲದೇ ಸಮಸ್ಯೆಯಾಗಿದೆ. ಮನೆಗೆ ವಿದ್ಯುತ್, ನೀರು ಸಂಪರ್ಕವನ್ನು ಇದೇ ರಸ್ತೆಗೆ ಹೊಂದಿಕೊಂಡಂತೆ ಪಡೆಯಲಾಗಿದೆ. ಈ ಓಣಿ ರಸ್ತೆಯಲ್ಲದೇ ವಾಸದ ಮನೆಗೆ ಹೋಗಲು ಯಾವುದೇ ಮಾರ್ಗ ಇರುವುದಿಲ್ಲ ಎಂದು ಹೇಳಿದರು.

ಮನೆಗೆ ಹೋಗುವ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಿಸಿದ್ದು, ನ್ಯಾಯ ದೊರಕಿಸಿಕೊಡಬೇಕೆಂದು ಸಾಕಮ್ಮ ಶೇಷಗಿರಿ ಕುಟುಂಬದವರು ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News