ಲಂಚ ಪಡೆಯುತ್ತಿದ್ದ ವೇಳೆ ಸರ್ಕಾರಿ ಭೂಮಾಪಕನನ್ನು ಬಂಧಿಸಿದ ಎಸಿಬಿ

Update: 2020-12-02 17:49 GMT

ಸೋಮವಾರಪೇಟೆ: ಕಾಫಿ ಬೆಳೆಗಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೇ ಸರ್ಕಾರಿ ಭೂಮಾಪಕನನ್ನು ಎಸಿಬಿ ಬುಧವಾರ ಬಂಧಿಸಿದೆ. 

ಪಟ್ಟಣದ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇಯರ್ ದಿಲೀಪ್ ಕುಮಾರ್ ಬಂಧಿತ ಆರೋಪಿ.

ಬಿಳಿಗೇರಿ ಗ್ರಾಮದ ತೇಲಪಂಡ ಸೋಮಯ್ಯ ಹಾಗು ಸಹೋಧರರು ಸುಂಠಿಕೊಪ್ಪ ಹೋಬಳಿಯ ವಳಮುಡಿ ಗ್ರಾಮದಲ್ಲಿ ಖರೀದಿಸಿರುವ ಸರ್ವೆ ನಂ. 119/5ರ 13.33 ಎಕರೆ ಜಂಟಿ ಖಾತೆ ಜಮೀನಿನ ಸರ್ವೆ ಹಾಗು ಕಂದಾಯ ನಿಗದಿಗೆ ದಾಖಲೆಗಳನ್ನು ಸಿದ್ದಪಡಿಸಲು ದಿಲೀಪ್ ಕುಮಾರ್ 25 ಸಾವಿರ ರೂ.ಗಳ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ.

ಈ ಬಗ್ಗೆ ಸೋಮಯ್ಯ ಅವರು ಮಡಿಕೇರಿಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ಮಧ್ಯಾಹ್ನ ಕಚೇರಿ ಆವರಣದಲ್ಲಿ ಸೋಮಯ್ಯ ಅವರಿಂದ 20 ಸಾವಿರ ರೂ, ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಆರೋಪಿಯನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಎಸಿಬಿ ದಕ್ಷಿಣ ವಲಯ ಪೊಲೀಸ್ ಅಧೀಕ್ಷರಾದ ಡಾ.ಸುಮನ್ ಡಿ.ಪಿ. ಅವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಸದಾನಂದ ತಿಪ್ಪಣವರ್, ಇನ್ಸ್‍ಪೆಕ್ಟರ್ ಶ್ರೀಧರ್, ಶಿಲ್ಪಾ, ಸಿಬ್ಬಂದಿಗಳಾದ ದಿನೇಶ್, ಪ್ರವೀಣ್, ಲೋಹಿತ್, ದೀಪಿಕಾ, ಸಜನ್, ಸುರೇಶ್, ವಿಶ್ವನಾಥ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News