ಬಾಲಕಿಯ ಅತ್ಯಾಚಾರ ಆರೋಪಿ ಅರ್ಚಕನಿಗೆ ಕಠಿಣ ಶಿಕ್ಷೆಯಾಗಲಿ: ಸುಪ್ರೀಂ ಕೋರ್ಟ್ ನ್ಯಾಯವಾದಿ ಸಂಖೇತ್ ಎಡಗಿ

Update: 2020-12-02 17:57 GMT

ಬೆಂಗಳೂರು, ಡಿ.2: ಇಲ್ಲಿನ ದೇವನಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪದಡಿ ಬಂಧನವಾಗಿರುವ ಅರ್ಚಕ ವೆಂಕಟರಮಣಪ್ಪಗೆ ಕಠಿಣ ಶಿಕ್ಷೆಯಾಗಬೇಕೆಂದು ಸುಪ್ರೀಂ ಕೋರ್ಟಿನ ನ್ಯಾಯವಾದಿ ಸಂಖೇತ್ ಎಡಗಿ ಆಗ್ರಹಿಸಿದರು.

ನಗರದ ಹೊರವಲಯದಲ್ಲಿರುವ ಸಂತ್ರಸ್ತೆ ಕುಟುಂಬಸ್ಥರನ್ನು ರಯಾನ್ ಫೌಂಡೇಷನ್ ನೇತೃತ್ವದ ನಿಯೋಗ ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

10 ವರ್ಷದ ಬಾಲಕಿಯನ್ನು ಗುರಿಯಾಗಿಸಿಕೊಂಡು ಅರ್ಚಕ ವೆಂಕಟರಮಣಪ್ಪ ಹೀನಕೃತ್ಯವೆಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಯಬೇಕು. ಜತೆಗೆ, ಸಾಕ್ಷ್ಯ ನಾಶಪಡಿಸುವ ಹಿನ್ನೆಲೆ ಅವರಿಗೆ ತ್ವರಿತವಾಗಿ ಜಾಮೀನು ದೊರೆಯಬಾರದು ಎಂದು ತಿಳಿಸಿದರು.

ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದೇಶದೆಲ್ಲೆಡೆ ದಿನನಿತ್ಯ ಬೆಳಕಿಗೆ ಬರುತ್ತಿದ್ದು, ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕಬೇಕಿದೆ ಎಂದ ಅವರು, ಆರೋಪಿಗಳು ಎಷ್ಟೇ ಪ್ರಭಾವಿಗಳಿದ್ದರೂ, ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ರಯಾನ್ ಫೌಂಡೇಷನ್ ಅಧ್ಯಕ್ಷ ಬಿ.ಎಸ್.ರಫೀವುಲ್ಲಾ ಮಾತನಾಡಿ, ಸಂತ್ರಸ್ತೆಯ ಕುಟುಂಬಸ್ಥರಿಗೆ ಸೂಕ್ತ ರೀತಿಯ ಭದ್ರತೆ ನೀಡಲು ಪೊಲೀಸ್ ಇಲಾಖೆ ಮುಂದಾಗಬೇಕು. ಅದೇ ರೀತಿ, ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗವು ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿ, ತನಿಖೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿಯೇ ಈ ರೀತಿಯ ಕೃತ್ಯ ನಡೆದಿರುವುದು ಕಳಂಕದ ವಿಚಾರ. ಆರೋಪಿಗಳು ಯಾರೇ ಆಗಿದ್ದರು ಪಾರದರ್ಶಕ ತನಖೆ ನಡೆದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸೈಯದ್ ಮತೀನ್, ಇಫ್ಜಲ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News