ತನ್ನ ರಾಜಕೀಯ ಭವಿಷ್ಯದ ಬಗ್ಗೆ ಟ್ರಂಪ್ ಹೇಳಿದ್ದೇನು?

Update: 2020-12-03 04:09 GMT

ವಾಷಿಂಗ್ಟನ್, ಡಿ.3: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಅವರ ಗೆಲುವನ್ನು ಬುಡಮೇಲು ಮಾಡುವ ಪ್ರಯತ್ನದಲ್ಲಿ ಪ್ರತಿ ಹಂತದಲ್ಲೂ ಸೋಲುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ 2024ರಲ್ಲಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

"ಕಳೆದ ನಾಲ್ಕು ವರ್ಷಗಳು ಅದ್ಭುತ. ಮತ್ತೆ ನಾಲ್ಕು ವರ್ಷಗಳಿಗೆ ನಾವು ಪ್ರಯತ್ನಿಸುತ್ತಿದ್ದೇವೆ. ಇಲ್ಲದಿದ್ದರೆ, ನಾಲ್ಕು ವರ್ಷಗಳ ಬಳಿಕ ನಿಮ್ಮನ್ನು ನೋಡುತ್ತೇನೆ" ಎಂದು ಶ್ವೇತಭವನ ಆಯೋಜಿಸಿದ್ದ ಕ್ರಿಸ್ಮಸ್ ಪಾರ್ಟಿಯಲ್ಲಿ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

ಹಲವು ಮಂದಿ ರಿಪಬ್ಲಿಕನ್ ಪಾರ್ಟಿ ಮುಖಂಡರು ಭಾಗವಹಿಸಿದ್ದ ಕೂಟದಲ್ಲಿ ಮಾಧ್ಯಮದವರನ್ನು ನಿರ್ಬಂಧಿಸಿದ್ದರೂ, ನಿರ್ಗಮನ ಅಧ್ಯಕ್ಷರ ಭಾಷಣ ಕುರಿತ ವಿಡಿಯೊ ತಕ್ಷಣವೇ ಬಹಿರಂಗವಾಗಿದೆ.

ನವೆಂಬರ್ 3ರಂದು ನಡೆದ ಚುನಾವಣೆಯ ಸೋಲನ್ನು ಒಪ್ಪಿಕೊಳ್ಳಲು ಇನ್ನೂ ಸಿದ್ಧರಿಲ್ಲದ 74 ವರ್ಷ ವಯಸ್ಸಿನ ಟ್ರಂಪ್, ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ, ಟ್ವೀಟ್‌ಗಳ ಮೂಲಕ ಮತದಾನದಲ್ಲಿ ಅಕ್ರಮ ನಡೆದಿದೆ ಎಂದು ಆಪಾದಿಸುತ್ತಲೇ ಇದ್ದಾರೆ.

ಟ್ರಂಪ್ ಅವರ ನಿಕಟವರ್ತಿಯಾಗಿರುವ ಅಟಾರ್ನಿ ಜನರಲ್ ಬಿಲ್ ಬಾರ್ರ್‌ ಅವರೇ ಮಂಗಳವಾರ "ಫಲಿತಾಂಶ ವ್ಯತಿರಿಕ್ತವಾಗುವ ಮಟ್ಟದ ಅಕ್ರಮಗಳು ಕಂಡುಬಂದಿಲ್ಲ" ಎಂದು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News