ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ ಪ್ರಕರಣ: ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144 ಜಾರಿ

Update: 2020-12-03 13:50 GMT

ಶಿವಮೊಗ್ಗ, ನ.3: ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನಗರದಲ್ಲಿ ಉಂಟಾದ ಘರ್ಷಣೆಯ ಹಿನ್ನಲೆಯಲ್ಲಿ ಡಿ.3ರಿಂದ ಡಿ.5ರವರೆಗೂ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿ ತಹಶೀಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144 ರನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. ನಗರದಲ್ಲಿ ಈವರೆಗೆ ನಡೆದ ಗಲಾಟೆಯಲ್ಲಿ 11 ಮಂದಿಗೆ ಸಣ್ಣಪಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಲ್ಕು ಕಾರು, ಒಂದು ಆಟೋ ಜಖಂಗೊಂಡಿದೆ. ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದು ಮತ್ತು ಐದಕ್ಕಿಂತ ಜನರು ಗುಂಪು ಸೇರುವುದನ್ನು ನಿರ್ಬಂಧಿಸಿದೆ. ಮೆರವಣಿಗೆ ಅಥವಾ ಸಭೆ, ಸಮಾರಂಭಗಳನ್ನು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶಗಳನ್ನು ನಿಷೇಧಿಸಿದೆ.

ಶಸ್ತ್ರಗಳನ್ನು ದೊಣ್ಣೆ, ಕತ್ತಿ, ಇಟ್ಟಿಗೆ, ಚಾಕು ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆ ಉಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು, ಶೇಖರಿಸುವುದನ್ನು ನಿಷೇಧಿಸಿದೆ. ಯಾವುದೇ ಸ್ಫೋಟಕ ವಸ್ತುಗಳನ್ನು (ಪಟಾಕಿ/ಸಿಡಿಮದ್ದು) ಬಳಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳನ್ನು/ ಉಪಕರಣಗಳ ಒಯ್ಯುವಿಕೆ ಮತ್ತು ಶೇಖರಿಸುವುದನ್ನು ನಿಷೇಧಿಸಿದೆ. ಯಾವುದೇ ಖಾಸಗಿ/ಸಾರ್ವಜನಿಕ ಆಸ್ತಿಗಳನ್ನು ಹಾನಿಗೊಳಿಸುವ ಮತ್ತು ವಿರೂಪಗೊಳಿಸುವ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News