'ಗೋಹತ್ಯೆ ನಿಷೇಧ ಕಾಯ್ದೆ' ಬಗ್ಗೆ ಚರ್ಚಿಸಲು ಯುಪಿ ಸಿಎಂ ಆದಿತ್ಯನಾಥ್ ಭೇಟಿಯಾದ ಸಚಿವ ಪ್ರಭು ಚೌಹಾಣ್

Update: 2020-12-03 14:23 GMT
Photo: Twitter | @PrabhuChavanBJP

ಬೆಂಗಳೂರು, ಡಿ. 3: ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅತ್ಯಂತ ಕಠಿಣವಾಗಿ ಜಾರಿಗೊಳಿಸಲಾಗಿದ್ದು ಕರ್ನಾಟಕದಲ್ಲಿಯೂ ಗೋಹತ್ಯೆ ನಿಷೇಧ ತರಲು ಉದ್ದೇಶಿಸಿರುವುದಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ಗುರುವಾರ ಗುಜರಾತ್ ಮತ್ತು ಉತ್ತರಪ್ರದೇಶದ ಪ್ರವಾಸದಲ್ಲಿರುವ ಸಚಿವ ಪ್ರಭು ಚೌಹಾಣ್ ಉತ್ತರ ಪ್ರದೇಶದ ಭೇಟಿಯ ವೇಳೆ ಮುಖ್ಯಮಂತ್ರಿ ಆದಿತ್ಯನಾಥ್್ ಅವರನ್ನು ಭೇಟಿ ಮಾಡಿ ಗೋಹತ್ಯೆ ನಿಷೇಧ ಕಾಯ್ದೆಯ ಕುರಿತಾಗಿ ಸುದೀರ್ಘವಾಗಿ ಚರ್ಚೆ ನಡೆಸಿದರು. ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಪಟ್ಟಂತೆ ಅತ್ಯಂತ ಕಠಿಣ ಕ್ರಮಗಳನ್ನು ಜರುಗಿಸಲಾಗಿದ್ದು, ಗೋಹತ್ಯೆ ನಿಷೇಧ ಯಶಸ್ವಿಯಾಗಿ ಜಾರಿಯಲ್ಲಿದೆ. ಅಲ್ಲದೆ, ಕರ್ನಾಟಕ ಸರಕಾರವೂ ಇದೇ ಮಾದರಿಯಲ್ಲಿ ಕಾಯ್ದೆ ಜಾರಿಗೊಳಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಆಶಯ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ಉತ್ತರ ಪ್ರದೇಶದಲ್ಲಿ ಅನುಷ್ಠಾನವಾದ ರೀತಿಯ ಬಗ್ಗೆ ಪ್ರಭು ಚೌಹಾಣ್, ಅಲ್ಲಿನ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಗೋಶಾಲೆಗಳ ನಿರ್ವಹಣೆ ಮತ್ತು ಗೋವುಗಳ ಆರೈಕೆಯ ಬಗ್ಗೆ ಅವರು ಮಾಹಿತಿ ಪಡೆದರು.

ಉತ್ತಮ ದೇಶಿ ಗೋವು ತಳಿಗಳ ಅಭಿವೃದ್ಧಿಯ ಕುರಿತು ಉತ್ತರಪ್ರದೇಶ ಪಶುಸಂಗೋಪನೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಅತ್ಯುತ್ತಮ ಉತ್ಪಾದನಾ ಸಾಮರ್ಥ್ಯ ಹೊಂದಿದ ಸಾಹಿವಾಲ್ ತಳಿಯ ಎರಡು ಹೋರಿಗಳು ಹಾಗೂ ಹತ್ತು ಹಸುಗಳನ್ನು ಕರ್ನಾಟಕ ರಾಜ್ಯಕ್ಕೆ ಒದಗಿಸಲು ಹಿರಿಯ ಅಧಿಕಾರಿಗಳು ಒಪ್ಪಿಗೆ ಸೂಚಿಸಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಇದೆ ವೇಳೆ ಉತ್ತರಪ್ರದೇಶದ ರವಣಖೇಡ ಬುಲ್ ಫಾರ್ಮ್ ಹಾಗೂ ಸಾಹಿವಾಲ್ ಅಂಬ್ಯುಲರ್ ಟ್ರಾನ್ಸಫರ್ ಟೆಕ್ನಾಲಜಿ ಕ್ಷೇತ್ರಗಳಿಗೆ ಸಚಿವ ಪ್ರಭು ಚೌಹಾಣ್ ಅವರು ಭೇಟಿ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News