‘ಹೋರಾಟ ಬೆಂಬಲಿಸಿ, ಇಲ್ಲವೇ ತೆಪ್ಪಗಿರಿ': ಸಿದ್ದರಾಮಯ್ಯ ವಿರುದ್ಧ ಕುರುಬರ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷರ ವಾಗ್ದಾಳಿ

Update: 2020-12-03 14:46 GMT

ಬೆಂಗಳೂರು, ಡಿ. 3: 'ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ(ಎಸ್ಟಿ) ಸೇರ್ಪಡೆ ಹೋರಾಟದ ನಾಯಕತ್ವ ಸ್ವಾಮೀಜಿಗಳದ್ದೇ ಹೊರತು ಯಾವುದೇ ಪಕ್ಷದ ಮುಖಂಡನದಲ್ಲ. ಆದರೆ, ಕೆಲ ನಾಯಕರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಭರದಲ್ಲಿ ಸಮಾಜದಿಂದ ದೂರವಾಗುತ್ತಿರುವುದು ಸಾಧುವಲ್ಲ. ಸದ್ಯ ಅವರ ಮುಂದಿರುವ ಆಯ್ಕೆ ಹೋರಾಟ ಬೆಂಬಲಿಸುವುದು, ಇಲ್ಲವಾದರೆ ತೆಪ್ಪಗಿರುವುದು' ಎಂದು ಕುರುಬರ ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೆ.ವಿರೂಪಾಕ್ಷಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ವಿರೂಪಾಕ್ಷಪ್ಪ, 'ಕುರುಬರ ಎಸ್ಟಿ ಸೇರ್ಪಡೆ ಆಳುವ ಸರಕಾರಗಳು ಮನಸ್ಸು ಮಾಡಿದರೆ ಸಂವಿಧಾನದಲ್ಲಿ ಅವಕಾಶವಿದೆ. ತಮಿಳುನಾಡಿನಲ್ಲಿನ ಮೀಸಲಾತಿಯನ್ನು ನಾವಿಲ್ಲಿ ಉದಾಹರಿಸಬಹುದು. ಪರಿಶಿಷ್ಟ ಪಂಗಡಗಳಿಗೆ ಶೇ.7.5ರಷ್ಟು ಮೀಸಲಾತಿ ಹೆಚ್ಚಳ ಮಾಡುವುದು ನ್ಯಾ.ನಾಗಮೋಹನ್ ದಾಸ್ ಸಮಿತಿ ಶಿಫಾರಸ್ಸಾಗಿದೆ. ಶೇ.6ರಷ್ಟಿರುವ ಕುರುಬರು ಎಸ್ಟಿಗೆ ಸೇರ್ಪಡೆಯಾದರೆ ಒಟ್ಟು ಮೀಸಲಾತಿ ಪ್ರಮಾಣ ಶೇ.13.5ರಷ್ಟಾಗಲಿದೆ ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರವರ್ಗ-1ರಲ್ಲಿದ್ದ ತಳವಾರ, ಪರಿವಾರ ಮತ್ತು ಸಿದ್ದಿ ಜಾತಿಗಳನ್ನು 2020ರ ಫೆಬ್ರವರಿಯಲ್ಲಿ ಎಸ್ಟಿಗೆ ಸೇರಿಸಿರುವ ಈ ಸಂದರ್ಭದಲ್ಲಿ ನಾವು ಕುರುಬರಿಗೆ ಎಸ್ಟಿ ಮೀಸಲಾತಿ ಜಾರಿಯಾಗುವುದು ದೊಡ್ಡದೇನಲ್ಲ. ಈ ಹಿಂದಿನ ನಾಯಕರು ತಮ್ಮ ಹಿತಾಸಕ್ತಿ ಕಾರಣಕ್ಕಾಗಿ ಮೀಸಲಾತಿ ಸೊಲ್ಲನ್ನೆತ್ತದೆ ಮಲಗಿದ್ದರು ಎಂದು ವಿರೂಪಾಕ್ಷಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯನರ ಹೆಸರು ಉಲ್ಲೇಖಿಸಿದರೆ ಲೇವಡಿ ಮಾಡಿದ್ದಾರೆ.

'ಕುರುಬರ ಎಸ್ಟಿ ಹೋರಾಟದ ಹಿಂದೆ ಆರೆಸ್ಸೆಸ್ ಕೈವಾಡವಿದೆ. ಸಮಾಜ ಒಡೆಯುವ, ಮುಗ್ಧರನ್ನು ದಾರಿ ತಪ್ಪಿಸಲಾಗುತ್ತಿದೆ' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಕುರುಬರ ಎಸ್ಟಿ ಹೋರಾಟ ಸಮಿತಿ ಮುಖಂಡರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News