ರೈತರನ್ನು ಹೇಡಿ ಎಂದು ಕರೆಯುವ ನೈತಿಕತೆ ನಿಮಗೇನಿದೆ: ಸಚಿವ ಬಿ.ಸಿ.ಪಾಟೀಲ್‍ ವಿರುದ್ಧ ಡಿಕೆಶಿ ಕಿಡಿ

Update: 2020-12-03 15:18 GMT

ಬೆಂಗಳೂರು, ಡಿ. 3: 'ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು' ಎನ್ನುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೇ.. ಇದೇ ರೈತರ ಮೇಲೆ ಗುಂಡು ಹಾರಿಸುವ, ಲಾಠಿ ಚಾರ್ಜ್ ಮಾಡುವ, ಕರಾಳ ಕಾಯ್ದೆ ಮೂಲಕ ಅವರ ಬದುಕಿಗೆ ಕೊಳ್ಳಿ ಇಡುತ್ತಿರುವ ಬಿಜೆಪಿಗರು ದೊಡ್ಡ ಶೂರರೇ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, 'ಕೃಷಿ ಸಚಿವರಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೇ ರೈತರನ್ನು ಹೇಡಿ ಎಂದು ಕರೆಯುವ ನೈತಿಕತೆ ನಿಮಗೇನಿದೆ? ರೈತರ ಜೀವನ ಹಸನಾಗಿಸುವ ಒಂದೇ ಒಂದು ಯೋಜನೆಯನ್ನೂ ರೂಪಿಸದೆ ಇಂತಹ ಹೇಳಿಕೆ ನೀಡಿದ್ದಲ್ಲದೆ, ಅದನ್ನು ಸಮರ್ಥಿಸಿ ಅಹಂಕಾರವನ್ನು ತೋರುತ್ತಿದ್ದೀರಿ. ಕೃಷಿ ಸಚಿವ ಸ್ಥಾನಕ್ಕೆ ನೀವು ಅನರ್ಹರು. ಕೂಡಲೇ ರಾಜೀನಾಮೆ ಕೊಡಿ' ಎಂದು ಆಗ್ರಹಿಸಿದ್ದಾರೆ.

'ಪ್ರವಾಹದಿಂದ ನಷ್ಟಕ್ಕೆ ಒಳಗಾದ ರೈತರು, ಸಂಸದರನ್ನು ಪರಿಹಾರ ಕೇಳಿದ್ದಕ್ಕೆ ಪ್ರತಿಯಾಗಿ ಅವರ ಮೇಲೆ ಸುಳ್ಳು ಕೇಸು ದಾಖಲಿಸಿ ವಿಚಾರಣೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೇ ಈಗ ಹೇಳಿ ಹೇಡಿಗಳು ರೈತರೋ? ಅಥವಾ ನಿಮ್ಮ ಸಂಸದ ಹಾಗೂ ಸರಕಾರವೋ? ಯಾರು ಹೇಡಿಗಳು ಉತ್ತರಿಸಿ' ಎಂದು ಅವರು ಆಗ್ರಹಿಸಿದ್ದಾರೆ.

'ನೆರೆಯಿಂದ ಬೆಳೆ ನೀರುಪಾಲಾದಾಗ, ಕೊರೋನ ಲಾಕ್‍ಡೌನ್‍ನಿಂದ ಜಮೀನಿನಲ್ಲೇ ಕೊಳೆತಾಗ, ಬೆಲೆ ಇಲ್ಲದಾದಾಗ, ಸಾಲಗಾರರು ಮನೆ ಬಾಗಿಲಿಗೆ ಬಂದಾಗ ನೀವೆಲ್ಲಿದ್ದಿರಿ? ರೈತರ ಮೇಲೆ ಗುಂಡು ಹಾರಿಸಿ, ಲಾಠಿ ಚಾರ್ಜ್ ಮಾಡಿ, ಕರಾಳ ಕಾಯ್ದೆಗಳ ಮೂಲಕ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಸಿರುವ ಬಿಜೆಪಿಗರು ದೊಡ್ಡ ಶೂರರೇ?' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆತ್ಮಹತ್ಯೆಯಂತಹ ಕೆಲಸ ಹೇಡಿತನದ್ದು ಎಂದಿದ್ದೇನೆ

'ನಾನು ರೈತರನ್ನು ಹೇಡಿ ಎಂದು ಎಂದಿಗೂ ಸಂಬೋಧಿಸಿಲ್ಲ. ಆತ್ಮಹತ್ಯೆಯಂತಹ ಕೆಲಸ ಹೇಡಿತನದ್ದು ಎಂದಿದ್ದೇನೆ' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ಕೊಡಗು ಜಿಲ್ಲೆಯಲ್ಲಿ ನಡೆದ ಸಮಾರಂಭದಲ್ಲಿ ತಾವು ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅವರು, 'ಯಾರೇ ಆಗಲೀ ಆತ್ಮಹತ್ಯೆಯಂತಹ ಹೇಡಿತನದ ಕೆಲಸಕ್ಕೆ ಮುಂದಾಗಬಾರದು. ಕಷ್ಟ-ನಷ್ಟಗಳನ್ನು ಈಜಿ ಜಯಿಸಬೇಕು. ಕಷ್ಟಗಳು ಇಂದಿದ್ದಂತೆ ನಾಳೆ ಇರುವುದಿಲ್ಲ' ಎಂದು ಹೇಳಿದ್ದೇನೆ ಎಂದು ವಿವರಣೆ ನೀಡಿದ್ದಾರೆ.

'ಕತ್ತಲಾದ ಮೇಲೆ ಬೆಳಕು ಬಂದೇ ಬರುತ್ತದೆ. ಕೋಲಾರ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಸಮಗ್ರ ಕೃಷಿನೀತಿಯನ್ನು ಅಳವಡಿಸಿಕೊಂಡು ಮಾದರಿಯಾಗಿದ್ದಾರೆ. ಕೋಲಾರ ರೈತರು ಮಾದರಿ ಎಂದಿದ್ದೇನೆ. ರೈತರ ಆತ್ಮಹತ್ಯೆ ಪ್ರಯತ್ನಗಳನ್ನು ತಡೆಯುವ ನಿಟ್ಟಿನಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಸಮಗ್ರ ಕೃಷಿ ನೀತಿಯನ್ನು ರೈತರು ಹೆಚ್ಚೆಚ್ಚು ಅಳವಡಿಸಿಕೊಳ್ಳಬೇಕು' ಎಂದು ಅವರು ಪ್ರಕಟಣೆಯಲ್ಲಿ ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News