ಡಿ.5ರ ಕರ್ನಾಟಕ ಬಂದ್ ಬೆಂಬಲಿಸುವಂತೆ ಕನ್ನಡಪರ ಸಂಘಟನೆಗಳ ಮನವಿ

Update: 2020-12-03 15:28 GMT

ಬೆಂಗಳೂರು, ಡಿ.3: ರಾಜ್ಯ ಸರಕಾರ ರಚಿಸಿರುವ ಮರಾಠ ಅಭಿವೃದ್ಧಿ ನಿಗಮವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಡಿ.5 ರಂದು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಬೆಂಬಲ ನೀಡಬೇಕೆಂದು ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಇಂದಿಲ್ಲಿ ಮನವಿ ಮಾಡಿದರು.

ಗುರುವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡ ಸಾ.ರಾ.ಗೋವಿಂದು ಸೇರಿದಂತೆ ಮತ್ತಿತರರು, ಬಂದ್‍ಗೆ ಬೆಂಬಲ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತಾ, ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಹೊಟೇಲ್ ಮಾಲಕರು, ಫುಟ್‍ಪಾತ್ ವ್ಯಾಪಾರಿಗಳು, ಚಲನಚಿತ್ರ ಮಂದಿರದವರು, ಮಾಲ್‍ಗಳು, ವರ್ತಕರು, ಲಾರಿ ಮಾಲಕರು, ಆಟೋ-ಟ್ಯಾಕ್ಸಿ ಚಾಲಕರು, ಮಾಲಕರು, ಖಾಸಗಿ ಕಂಪೆನಿಗಳು, ಸರಕಾರಿ ನೌಕರರು, ರಸ್ತೆ-ಸಾರಿಗೆ ಸಂಸ್ಥೆಗಳವರು ಸೇರಿದಂತೆ ಎಲ್ಲರೂ ಬಂದ್‍ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಲಾಗಿದೆ.

ರಾಜ್ಯದಾದ್ಯಂತ ಈ ಬಂದ್‍ಗೆ ಉತ್ತಮವಾಗಿ ಸ್ಪಂದನೆ ವ್ಯಕ್ತವಾಗಿದೆ. ಶುಕ್ರವಾರವೂ ಎಲ್ಲೆಡೆ ನಾವು ಪ್ರಚಾರ ಕೈಗೊಳ್ಳುತ್ತಿದ್ದೇವೆ. ಇದು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದೆ. ಕನ್ನಡಿಗರನ್ನು, ಕನ್ನಡಪರ ಹೋರಾಟಗಾರರನ್ನು ನಿರಂತರವಾಗಿ ಅವಮಾನ ಮಾಡುವ ಕನ್ನಡಿಗರ ಹಿತಾಸಕ್ತಿಗೆ ಧಕ್ಕೆ ತರುವ ತೀರ್ಮಾನ ಕೈಗೊಳ್ಳುವ ಸರಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ ಎಂದು ಹೇಳಿದರು.

ಕನ್ನಡದ, ಕರ್ನಾಟಕದ ಅಸ್ಮಿತೆಯ ಉಳಿವಿಗಾಗಿ ನಡೆಯುತ್ತಿರುವ ಬಂದ್ ಬೆಂಬಲಿಸಿ, ಯಾರೂ ಮನೆಗಳಿಂದ ಹೊರಬರಬೇಡಿ. ಅಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೂ ಬಂದ್ ನಡೆಯಲಿದೆ. ರಾಜ್ಯಾದ್ಯಂತ 1600ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು, ರೈತ, ಕಾರ್ಮಿಕ ಸಂಘಟನೆಗಳು ಬೆಂಬಲ ಘೋಷಿಸಿವೆ ಎಂದು ತಿಳಿಸಿದರು.

ಸಾರಿಗೆ ನೌಕರರ ಸಂಘದ ಕಾರ್ಮಿಕ ಸಂಘಟನೆಯ ಅನಂತ ಸುಬ್ಬರಾವ್‍ಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಅಲ್ಲದೆ, ಕನ್ನಡಪರ ಸಂಘಟನೆಗಳಿಗೂ ಮನವಿ ಸಲ್ಲಿಸಲಾಗಿದೆ. ಅವರುಗಳು, ಗಡಿಗಳನ್ನು ಬಂದ್ ಮಾಡಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಬಂದ್‍ಗೆ ಬಲ ಬಂದಿದೆ. ವಕೀಲರ ಸಂಘ ಸೇರಿದಂತೆ ಎಲ್ಲರೂ ಬಂದ್ ಗೆ ಬೆಂಬಲ ಘೋಷಿಸಿದ್ದಾರೆ ಎಂದು ಹೇಳಿದರು.

ಕನ್ನಡಪರ ಸಂಘಟನೆಯ ಮುಖಂಡ ಸಾ.ರಾ.ಗೋವಿಂದು ಮಾತನಾಡಿ, ನಾವು ಶಾಂತಿಯುತವಾಗಿ ಬಂದ್ ಮಾಡುತ್ತೇವೆ. ಬಂದ್ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಬಸ್‍ಗಳನ್ನು ಕನ್ನಡಪರ ಹೋರಾಟಗಾರರು ತಡೆಯಲಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಿದ್ದಾರೆ. ಹೊಟೇಲ್ ಸಂಘದವರು ನೈತಿಕ ಬೆಂಬಲ ಎಂದು ತಿಳಿಸಿದ್ದಾರೆ ಎಂದರು.

ಡಿ.5ರ ಬಂದ್ ಆಚರಣೆಗಷ್ಟೇ ನಮ್ಮ ಹೋರಾಟ ಸೀಮಿತವಾಗಿಲ್ಲ. ರಾಜಕೀಯ ಕಾರಣಕ್ಕಾಗಿ ರಚನೆಯಾಗಿರುವ ಮರಾಠ ಅಭಿವೃದ್ಧಿ ನಿಗಮವನ್ನು ಸರಕಾರ ಹಿಂಪಡೆಯದಿದ್ದರೆ 5ರ ನಂತರ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳುತ್ತೇವೆ. ನಮ್ಮ ಹೋರಾಟ ನಿರಂತರವಾಗಿರುತ್ತದೆ. ಬಂದ್‍ಗೆ ಎಲ್ಲರೂ ಬೆಂಬಲ ನೀಡಬೇಕೆಂದು ಪ್ರಚಾರಾಂದೋಲನ ನಡೆಸುತ್ತೇವೆ. ಬಹುತೇಕ ಎಲ್ಲರೂ ಬೆಂಬಲ ಘೋಷಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News