ಶಿರೂರು ಅರಣ್ಯದಲ್ಲಿ ಜಿಂಕೆ ಶಿಕಾರಿ: ಆರೋಪಿ ಬಂಧನ

Update: 2020-12-03 15:46 GMT

ಶಿವಮೊಗ್ಗ, ಡಿ.03: ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ವಲಯ ಅರಣ್ಯಾಧಿಕಾರಿಗಳ ನೇತೃತ್ವದ ತಂಡ ಜಿಂಕೆಯನ್ನು ಬೇಟೆಯಾಡಿ ತಪ್ಪಿಸಿಕೊಂಡು ಹೋಗುತ್ತಿದ್ದವನನ್ನು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮಂಗಳವಾರ ತಡರಾತ್ರಿ ವೇಳೆ ಶಿರೂರು ದಟ್ಟ ಅರಣ್ಯದಲ್ಲಿ ಕೊಕ್ಕೋಡು ವಾಸಿ ದಿಲೀಪ್ ಎಂಬಾತ ಜಿಂಕೆ ಬೇಟೆಯಾಡಿದ್ದ ಎನ್ನಲಾಗಿದೆ. ಮೇಗರವಳ್ಳಿ ಆರ್ ಎಫ್ಒ ಉಮಾರವರು ರಾತ್ರಿ ಗಸ್ತಿನಲ್ಲಿರುವಾಗ ದೀಪಕ್ ಎಂಬಾತ ಕೈಯಲ್ಲಿ ನಾಡ ಬಂದೂಕು ಹಿಡಿದು ನಿಂತಿರುವುದನ್ನು ಗಮನಿಸಿದ್ದಾರೆ. ಈ ವೇಳೆ ಈತನನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಡೆಸುತ್ತಿದ್ದಂತೆ ಓಮ್ನಿಯಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ.

ತಕ್ಷಣವೇ ಆತನನ್ನು ಬೆನ್ನಟ್ಟಿಕೊಂಡು ಹೋಗಿದ್ದಾರೆ. ಕಾಡಿನಲ್ಲಿ ದೀಪಕ್‌ಗೆ ಮುಂದೆ ರಸ್ತೆ ಕಾಣದೆ ಇದ್ದಾಗ ಅರಣ್ಯ ಇಲಾಖೆಯವರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಯಾವುದೇ ಪ್ರಾಣಹಾನಿಯಾಗಿಲ್ಲವೆಂದು ತಿಳಿದು ಬಂದಿದೆ.

ಬೇಟೆಯಾಡಿದ್ದ ಸತ್ತ ಜಿಂಕೆ, ನಾಡ ಬಂದೂಕು(ತೋಟಕೋವಿ) ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ವೈದ್ಯಕೀಯ ಪರೀಕ್ಷೆ ಹಾಗೂ ಹಿರಿಯ ಅಧಿಕಾರಿಗಳ ಭೇಟಿ, ಮಹಜರು ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News