ಆ್ಯಮ್ನೆಸ್ಟಿ ಬ್ಯಾಂಕ್ ಖಾತೆಗಳ ಸ್ಥಗಿತದ ಬಗ್ಗೆ ವಿವರಣೆ ನೀಡಲು ಈಡಿಗೆ ಹೈಕೋರ್ಟ್ ಸೂಚನೆ

Update: 2020-12-03 16:10 GMT

ಬೆಂಗಳೂರು, ಡಿ.3: ಭಾರತೀಯ ಬ್ಯಾಂಕ್‍ನಲ್ಲಿ ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ಟ್ರಸ್ಟ್ ತೆರೆದಿರುವ ಖಾತೆಗಳನ್ನು ಯಾವ ಕಾನೂನಿನ ಅಡಿ ಸ್ಥಗಿತಗೊಳಿಸಲು ನಿರ್ದೇಶನ ನೀಡಿದ್ದೀರಿ ಎಂಬ ಬಗ್ಗೆ ವಿವರಣೆ ನೀಡಲು ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್ ಸೂಚಿಸಿದೆ.     

ತಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಕ್ರಮ ಪ್ರಶ್ನಿಸಿ ಇಂಡಿಯನ್ಸ್ ಫಾರ್ ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ಟ್ರಸ್ಚ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಪಿ.ಎಸ್.ದಿನೇಶ್‍ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಈ ಸೂಚನೆ ನೀಡಿದೆ.

ಅರ್ಜಿದಾರರು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಟ್ರಸ್ಟ್ ನ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡುವಾಗಲೂ ಕಾನೂನಿನ ನಿಬಂಧನೆಗಳನ್ನು ಪಾಲಿಸಿಲ್ಲ. ಗ್ರಾಹಕರ ವಹಿವಾಟಿಗೆ ಸಂಬಂಧಿಸಿದ ಮಾಹಿತಿಗಳನ್ನು ಬ್ಯಾಂಕ್ ರಹಸ್ಯವಾಗಿ ಇರಿಸಬೇಕು ಮತ್ತು ಬೇರೆ ಯಾರಿಗೂ ಮಾಹಿತಿ ನೀಡಬಾರದು. ಆದರೂ ಬ್ಯಾಂಕ್ ಖಾತೆದಾರರ ವ್ಯವಹಾರಗಳನ್ನು ಇಡಿ ಜೊತೆ ಹಂಚಿಕೊಂಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ(ಎಫ್‍ಸಿಆರ್‍ಎ) ಉಲ್ಲಂಘಿಸಿ ಭಾರೀ ಮೊತ್ತದ ದೇಣಿಗೆ ಸಂಗ್ರಹಿಸಿದೆ ಎಂಬ ಆರೋಪದಡಿ 2019ರ ಅ.25ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆ್ಯಮ್ನೆಸ್ಟಿ ಕಚೇರಿ ಮೇಲೆ ದಾಳಿ ನಡೆಸಿದ್ದರು. ಆ್ಯಮ್ನೆಸ್ಟಿ ಸಂಸ್ಥೆಗೆ ಅಕ್ರಮವಾಗಿ ವಿದೇಶದಿಂದ 36 ಕೋಟಿ ಹಣ ವರ್ಗಾವಣೆಯಾಗಿದೆ. ಇದರಲ್ಲಿ 10 ಕೋಟಿಯನ್ನು ದೀರ್ಘಾವಧಿ ಸಾಲವಾಗಿ ಪಡೆಯಲಾಗಿದೆ. ಸಂಸ್ಥೆ ಪಿಎಂಎಲ್ಎ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಈಡಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News