ವಿಶ್ವನಾಥ್ ಹೇಳಿಕೆ ಬಗ್ಗೆ ಲೋಕಾಯುಕ್ತ ತನಿಖೆಗೆ ಸಿದ್ದರಾಮಯ್ಯ ಒತ್ತಾಯ

Update: 2020-12-03 16:19 GMT

ಮೈಸೂರು,ಡಿ.3: ಉಪಚುನಾವಣೆ ಸಮಯದಲ್ಲಿ ದೊಡ್ಡ ಮೊತ್ತದ ಹಣ ಕೊಡದೆ ವಂಚಿಸಿದರು ಎಂದು ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಹೇಳಿಕೆ ಕುರಿತು ಲೋಕಾಯುಕ್ತ ತನಿಖೆಯಾಗಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ನಗರದ ಟಿ.ಕೆ.ಲೇಔಟ್ ನಲ್ಲಿರುವ ಅವರ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉಪಚುನಾವಣೆ ಸಮಯದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಸಿಎಂ ರಾಜಕೀಯ ಕಾರ್ಯದರ್ಶಿ ಬಿ.ಆರ್.ಸಂತೋಷ್ ದೊಡ್ಡ ಮೊತ್ತದ ಹಣವನ್ನು ನನಗೆ ನೀಡದೆ ವಂಚಿಸಿದರು ಹಾಗಾಗಿ ನಾನು ಸೋಲಬೇಕಾಯಿತು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ. ಹಾಗಿದ್ದ ಮೇಲೆ ಉಪಚುನಾವಣೆಯಲ್ಲಿ ಹಣ ಹಂಚಲಾಗಿದೆ ಎಂಬುದು ಸ್ಪಷ್ಟ. ಇದು ಕಪ್ಪು ಹಣವೆ, ಬಿಳಿ ಹಣವೇ ? ಈ ಹಣ ಎಲ್ಲಿಂದ ಬಂತು, ಇದನ್ನು ನೀಡಿದವರು ಯಾರು, ಎಂಬ ಬಗ್ಗೆ  ಕೂಲಂಕಷ ತನಿಖೆಯಾಗಬೇಕು. ಇವರ ಹೇಳಿಕೆ ನೋಡಿದರೆ ಇದೊಂದೆ ಕ್ಷೇತ್ರದಲ್ಲಿ ಹಣದ ವಹಿವಾಟು ನಡೆದಿದೆ ಎನ್ನಿಸುವುದಿಲ್ಲ. ಉಪಚುನಾವಣೆ ನಡೆದ 15 ಕ್ಷೇತ್ರಗಳಲ್ಲೂ ಹಣ ನೀಡಲಾಗಿದೆ ಅನ್ನಿಸುತ್ತಿದೆ. ಹಾಗಾಗಿ ಈ ಕುರಿತು ಲೋಕಾಯುಕ್ತ ತನಿಖೆ ನಡೆಯಬೇಕು ಎಂದು ಹೇಳಿದರು.

ಲವ್ ಜಿಹಾದ್ ತಡೆಗೆ ಕಾನೂನು ಜಾರಿಗೆ ತರುವುದು ಸಂವಿಧಾನ ವಿರೋಧಿ ನಡೆ. 18 ವರ್ಷ ತುಂಬಿದ ಹೆಣ್ಣು, 21 ವರ್ಷ ತುಂಬಿದ ಗಂಡು ಯಾರನ್ನು ಯಾರು ಬೇಕಾದರೂ ಒಪ್ಪಿ ಮದುವೆಯಾಗಬಹುದು. ಇದನ್ನು ಬೇಡ ಎನ್ನಲು ಬಿಜೆಪಿಯವರು ಯಾರು? ಇದನ್ನು ನಿಯಂತ್ರಣ ಮಾಡುವುದು ಸಂವಿಧಾನ ವಿರೋಧಿ ನಡೆ ಎಂದು ಕಿಡಿಕಾರಿದರು.

ಇನ್ನು ಗೋಹತ್ಯೆ ನಿಷೇಧ ಕಾನೂನು ತಡೆಯೋದು ಬಿಡೋದು ಬೇರೆ ಪ್ರಶ್ನೆ. ಜನ ಇಂತಹ ಕಾನೂನುಗಳನ್ನು ಸಹಿಸಿಕೊಳ್ಳುವುದಿಲ್ಲ. ಇದೂ ಕೂಡ ಸಂವಿಧಾನ ವಿರೋಧಿ. ಇವರು ಜಾರಿ ಮಾಡಿದರೆ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಲಕ್ಷಾಂತರ ರೈತರು ಕಳೆದ ಒಂದು ವಾರದಿಂದ ದಿಲ್ಲಿ ಚಲೋ ನಡೆಸಿ ಹೋರಾಟ ಮಾಡುತ್ತಿದ್ದಾರೆ. ಅವರ ಸಮಸ್ಯೆ ಬಗೆಹರಿಸದೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮೊದಲು ರೈತ ವಿರೋಧಿ ಮಸೂದೆಗಳನ್ನು ಕೈಬಿಟ್ಟು, ರೈತರ ಸಮಸ್ಯೆಗೆ ಸ್ಪಂಧಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಂಗ್ರೆಸ್ ಮುಖಂಡುಗಳಾದ ಬಿ.ವಿ.ಸೀತಾರಾಮ್, ಶಿವಪ್ರಸಾದ್, ಕೆ.ಮಾರುತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News