ಸಂಸದರು ದಿಲ್ಲಿಯ ಚಾಂದಿನಿ ಚೌಕ್‍ನಲ್ಲಿ ಚಾಟ್ಸ್ ತಿನ್ನೋಕೆ ಯೋಗ್ಯರು: ಪ್ರಿಯಾಂಕ್ ಖರ್ಗೆ

Update: 2020-12-03 16:47 GMT

ಕಲಬುರಗಿ, ಡಿ.3: ರಾಜ್ಯದ ಸಂಸದರು ದಿಲ್ಲಿಯಲ್ಲಿರುವ ಚಾಂದಿನಿ ಚೌಕ್‍ನಲ್ಲಿ ಚಾಟ್ಸ್ ತಿನ್ನೋಕೆ ಯೋಗ್ಯರು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ ಖರ್ಗೆ ಕಿಡಿಕಾರಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷದ ರಾಜ್ಯದ ಸಂಸದರಿಗೆ ಸಂಸತ್ತು ಅಧಿವೇಶನದಲ್ಲಿ ಜನರ ಸಮಸ್ಯೆಗಳ ಪರ ಧ್ವನಿ ಎತ್ತುವ ಧೈರ್ಯವಿಲ್ಲ. ಎಲ್ಲ ಸಂಸದರು ದಿಲ್ಲಿಯಲ್ಲಿರುವ ಚಾಂದಿನಿ ಚೌಕ್‍ನಲ್ಲಿ ಚಾಟ್ಸ್ ತಿನ್ನೋಕಷ್ಟೇ ಯೋಗ್ಯರು ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಬಿಜೆಪಿಯು ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷದವರು ಸಂಸದರಾದರೆ ರಾಜ್ಯವು ಸರ್ವತೋಮುಖ ಅಭಿವೃದ್ಧಿಯನ್ನಾಗಿ ಮಾಡಲಾಗುತ್ತದೆ ಎಂದು ಹೇಳಿತ್ತು. ಆದರೆ, ಈಗ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದು, ರಾಜ್ಯದ ಜಿಎಸ್ಟಿ ತೆರಿಗೆ ಪಾಲನ್ನೂ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.

ಪ್ರಧಾನಿ ಬಳಿ ಹೋಗಿ ರಾಜ್ಯಕ್ಕೆ ತನ್ನ ಪಾಲು ದೊರಕಿಸಿಕೊಡಿ ಎನ್ನುವ ಶಕ್ತಿ ರಾಜ್ಯದ ಬಿಜೆಪಿ ಸಂಸದರಿಗಿಲ್ಲ. ರಾಜ್ಯದ ಹಿತ ಕಾಪಾಡುವಲ್ಲಿ ಸಂಸದರು ಮತ್ತು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಕರ್ನಾಟಕದ ಒಬ್ಬ ವ್ಯಕ್ತಿಯಿಂದ 20 ಸಾವಿರ ರೂಪಾಯಿ ಕೇಂದ್ರಕ್ಕೆ ತೆರಿಗೆ ಹೋಗುತ್ತೆ. ಬೇರೆ ರಾಜ್ಯದವರು ಇದರಲ್ಲಿ ಅರ್ಧದಷ್ಟೂ ತೆರಿಗೆ ಕಟ್ಟುತ್ತಿಲ್ಲ. ಆದರೂ, ಕಡಿಮೆ ತೆರಿಗೆ ಕೊಡೋ ರಾಜ್ಯಗಳಿಗೆ ಕೇಂದ್ರದಿಂದ ಹೆಚ್ಚಿನ ಆರ್ಥಿಕ ನೆರವು ಸಿಗುತ್ತಿದೆ. ಮೋದಿ ಸರಕಾರದಿಂದ ರಾಜ್ಯಕ್ಕೆ 60 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಆದರೆ, ಇದನ್ನ ಕೇಳೋರೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ: ಕೊರೋನ ಬಳಿಕ ಗ್ರಾಮ ಪಂಚಾಯತ್ ನೌಕರರಿಗೆ ವೇತನ ನೀಡಿಲ್ಲ. ಕೆಕೆಆರ್‍ಡಿಬಿಗೂ ಹಣ ನೀಡಿಲ್ಲ. ಇನ್ನು, ನೆರೆ ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡದೇ ಸರಕಾರ ನಿರ್ಲಕ್ಷ್ಯಿಸಿದೆ. ಭೀಮಾ ತೀರದಲ್ಲಿ ಆದ ಹಾನಿಯ ಮಾಹಿತಿ ಮಾತ್ರ ನೀಡಲಾಗಿದೆ. ಬೆಣ್ಣೆತೊರಾ, ಕಾಗಿಣಾ ನದಿಯಲ್ಲಿ ಆದ ಹಾನಿಯ ಮಾಹಿತಿಯನ್ನೇ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಶ್ರೀರಾಮಲು ಹೇಳಿಕೆಗೆ ವಿರೋಧ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕನ್ನು ಸಂವಿಧಾನದ ಆರ್ಟಿಕಲ್ 371 (ಎ) ಅಡಿ ಸೇರಿಸಬೇಕು ಎಂಬ ಸಚಿವ ಶ್ರೀರಾಮುಲು ಹೇಳಿಕೆಗೆ ವಿರೋದ ವ್ಯಕ್ತಪಡಿಸಿದ ಖರ್ಗೆ, ಈ ಭಾಗದ ಸಾರ್ವಜನಿಕರ ಅವಿರತ ಹೋರಾಟ ಹಾಗೂ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂಸಿಂಗ್ ಹೆಚ್ಚಿನ ಮುತುವರ್ಜಿಯಿಂದಾಗಿ ಸಂವಿಧಾನದ ಆರ್ಟಿಕಲ್ 371ಕ್ಕೆ ತಿದ್ದುಪಡಿ ತಂದು ಕಲ್ಯಾಣ ಕರ್ನಾಟಕ ಭಾಗವನ್ನು ಸೇರಿಸಿ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ. ಆದರೆ, ಈಗ ಸಚಿವರಾದ ಶ್ರೀರಾಮುಲು ಅವರು ತಾವು ಪ್ರತಿನಿಧಿಸುವ ಮೊಳಕಾಲ್ಮೂರು ತಾಲೂಕನ್ನು ಈ ವ್ಯಾಪ್ತಿಗೆ ಸೇರಿಸುವ ಪ್ರಯತ್ನ ನಡೆಸಿದ್ದಾರೆ. ಅವರ ಪ್ರಯತ್ನಕ್ಕೆ ನಮ್ಮ ಪ್ರಬಲ ವಿರೋಧವಿದೆ. ಶ್ರೀರಾಮಲುಗೆ ಹೋರಾಟದ ಜ್ಞಾನವಿಲ್ಲ. ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಈ ಹಿಂದಿನ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗಾಗಿ ವಿಶೇಷ ಸ್ಥಾನಮಾನ ಕಲ್ಪಿಸುವುದಕ್ಕಾಗಿ 371 (ಎ) ಜಾರಿಗೆ ತರಲಾಗಿದೆ ಎಂದು ಹೇಳಿದರು.

ಜಾಧವ್‍ಗೆ ಚಾಲೆಂಜ್: ಸಂಸದ ಉಮೇಶ್ ಜಾಧವ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಉತ್ತಮವಾಗಿ ಕೆಲಸ ಮಾಡಿದ್ದನ್ನು ತೋರಿಸಲಿ, ಮುಂದಿನ ಚುನಾವಣೆಯಲ್ಲಿ ನಾನು ಅವರಿಗೇ ಮತ ಹಾಕುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಚಾಲೆಂಜ್ ಮಾಡಿದ್ದಾರೆ.

ಉಮೇಶ್ ಜಾಧವ್ ಜನರ ಕೆಲಸ ಮಾಡೋ ಬದಲಿಗೆ ತಮ್ಮ ಹಕ್ಕುಗಳನ್ನು ಕೇಳೋ ಜನರ ಮೇಲೆ ಕೇಸು ಹಾಕೋ ಕೆಲಸ ಮಾಡ್ತಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ತಮ್ಮನ್ನು ತರಾಟೆಗೆ ತೆಗೆದುಕೊಂಡ ಮುತ್ತಗಾ ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ವಿನಾ ಕಾರಣ ರೈತರ ಮೇಲೆ ಪ್ರಕರಣ ದಾಖಲಿಸಿದ್ದವರ ವಿರುದ್ಧ ನಾನು ಹೋರಾಟ ಮಾಡ್ತೇನೆ. ಮುತ್ತಗಾ ಗ್ರಾಮಸ್ಥರ ಪರವಾಗಿ ನಾನು ನಿಲ್ಲುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News