ಬೆಂಗಳೂರಿನಲ್ಲೂ ಪ್ಯಾಪುಲರ್ ಫ್ರಂಟ್ ನಾಯಕರ ಮನೆ ಮೇಲೆ ಈಡಿ ದಾಳಿ

Update: 2020-12-03 16:51 GMT

ಬೆಂಗಳೂರು, ಡಿ.3: ದೇಶದ ಹಲವು ಭಾಗಗಳಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ನಾಯಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ದಾಳಿ ನಡೆಸಿದ್ದು, ಬೆಂಗಳೂರಲ್ಲಿಯೂ ಮೂರು ಕಡೆ ಕಾರ್ಯಾಚರಣೆ ಕೈಗೊಂಡಿದೆ. 

ನಗರದ ಬೆನ್ಸನ್ ಟೌನ್‍ನಲ್ಲಿ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಿಷ್ ಅಹ್ಮದ್, ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್ ವಾಹಿದ್ ಅವರ ಮನೆ ಮೇಲೆ ದಾಳಿ ನಡೆಸಿದೆ. ಅದೇ ರೀತಿ, ಇಲ್ಲಿನ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಪ್ಸರ್ ಶಾ ಅವರ ನಿವಾಸದ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. 

ಕಾರ್ಯಾಚರಣೆ ವೇಳೆ ಈಡಿ ತನಿಖಾಧಿಕಾರಿಗಳು, ಹಲವು ಮಾಹಿತಿಗಳನ್ನು ಸಂಗ್ರಹಿಸಿ, ಕೆಲ ದಾಖಲೆಗಳನ್ನು ಜಪ್ತಿ ಮಾಡಿರುವುದಾಗಿ ವರದಿಯಾಗಿದೆ.

"ತನಿಖಾ ಸಂಸ್ಥೆಗಳು ರಾಜಕೀಯ ಉದ್ದೇಶಕ್ಕೆ ಬಳಕೆ'
ದೇಶದಲ್ಲಿ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಪಿಎಫ್‍ಐ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಶಾಕಿಬ್ ಆರೋಪಿಸಿದರು. 

ಗುರುವಾರ ದೇಶದ ಹಲವು ಕಡೆಗಳಲ್ಲಿ ಪಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ನಾಯಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ(ಈಡಿ) ದಾಳಿ ನಡೆಸಿರುವುದನ್ನು ಖಂಡಿಸಿ ಪತ್ರಿಕಾಗೋಷ್ಠಿಯನ್ನುದ್ದೇಶೀಸಿ ಅವರು ಮಾತನಾಡಿದರು. 

ಹೊಸದಿಲ್ಲಿಯಲ್ಲಿ  ನಡೆಯುತ್ತಿರುವ ರೈತರ ಪ್ರತಿಭಟನೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪಿಎಫ್‍ಐ ನಾಯಕರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ದೂರಿದರು. 

ಅಧಿಕಾರದಲ್ಲಿರುವ ಸರಕಾರ ಜನಾಕ್ರೋಶದ ಒತ್ತಡಕ್ಕೆ ಗುರಿಯಾದಾಗ, ಅದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ದಾಳಿಗಳು ನಮ್ಮ ದೇಶದಲ್ಲಿ ಸರ್ವೇ ಸಾಮಾನ್ಯವಾಗಿದೆ. ಅಲ್ಲದೆ, ದೇಶಾದ್ಯಂತ ನಡೆದ ಪೌರತ್ವ ಹೋರಾಟದಲ್ಲಿ ಸಂಘಟನೆಯು ಮುಂಚೂಣಿಯಲ್ಲಿದ್ದ ಪ್ರಮುಖ ಪಡೆಯಾಗಿದ್ದ ಕಾರಣ ಮತ್ತು ಸಂವಿಧಾನ ವಿರೋಧಿ ಸಿಎಎ-ಎನ್‍ಆರ್‍ಸಿ ವಿರುದ್ಧ ಸಂಘಟನೆ  ಹೋರಾಟ ಮಾಡುವುದನ್ನು ತಡೆಯುವ ಉದ್ದೇಶದಿಂದ ದಾಳಿ ನಡೆಸಲಾಗಿದೆ. ಸಂಘಟನೆಯ ಗೌರವಕ್ಕೆ ಧಕ್ಕೆ ತರುವ ಇಂತಹ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸಲಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News