ಕುರುಬರಿಗೆ ಎಸ್ಟಿ ಮೀಸಲಾತಿ ವಿಚಾರದಲ್ಲಿ ನನ್ನ ಟಾರ್ಗೆಟ್: ಸಿದ್ದರಾಮಯ್ಯ

Update: 2020-12-03 16:54 GMT

ಮೈಸೂರು,ಡಿ.3: ಕುರುಬ ಸಮುದಾಯದವರಿಗೆ ಎಸ್ಟಿ ಮೀಸಲಾತಿ ನೀಡುವ ವಿಚಾರದ ಹಿಂದೆ ಆರೆಸ್ಸೆಸ್ ಕೈವಾಡವಿದ್ದು, ಈ ವಿಚಾರ ಮುಂದಿಟ್ಟುಕೊಂಡು ನನ್ನನ್ನು ಟಾರ್ಗೆಟ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ನಗರದ ಟಿ.ಕೆ.ಲೇಔಟ್‍ನಲ್ಲಿ ಅವರ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕುರುಬರಿಗೆ ಎಸ್ಟಿ ಮೀಸಲು ಕೊಡುವ ವಿಚಾರದಲ್ಲಿ ನಡೆಯುತ್ತಿರುವ ಹೋರಾಟ ರಾಜಕೀಯೇತರವಾಗಿದ್ದರೆ ನಾನು ಭಾಗವಹಿಸುತ್ತಿದ್ದೆ. ಆದರೆ, ಅದು ರಾಜಕೀಯೇತರ ಅಲ್ಲ. ಆರೆಸ್ಸೆಸ್ನವರು ಮಾಡಿಸುತ್ತಿರುವ ಕುತಂತ್ರ, ಸ್ವಾಮೀಜಿಗಳು ಪಾಲ್ಗೊಳ್ಳುತ್ತಿರುವುದಕ್ಕೆ ನಮ್ಮದೇನೂ ತಕರಾರು ಇಲ್ಲ. ಆರೆಸ್ಸೆಸ್ನವರು ಈಶ್ವರಪ್ಪ ಅವರನ್ನು ಬಳಸಿಕೊಂಡು ಸಮಾಜ ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುರುಬರ ಪರ ಈಶ್ವರಪ್ಪ ಇಲ್ಲ. ತಮ್ಮ ಸ್ವಾರ್ಥಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದ್ದರು. ಈಗ ಬ್ರಿಗೇಡ್ ಏನಾಗಿದೆ? ಉಡುಪಿಯಲ್ಲಿ ಕನಕಗೋಪುರ ಒಡೆದಾಗ ಮಠದ ಪರವಾಗಿ ಇದ್ದರು. ನಾವು ಮಠ ಸ್ಥಾಪನೆ ಮಾಡಿದಾಗ ಸಹಕಾರ ಕೊಡುವುದು ಇರಲಿ, ಭಾಗವಹಿಸಲೇ ಇಲ್ಲ. ಹಿಂದುಳಿದ ವರ್ಗದವರಿಗೆ ಮೀಸಲಾತಿ ಕೊಡಬಾರದೆಂದು ರಾಮಾಜೋಯಿಸ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದಾಗ ಯಾಕೆ ವಿರೋಧ ಮಾಡಲಿಲ್ಲ, ಹಿಂದುಳಿದ ವರ್ಗದ ಹಿತ ಯಾಕೆ ಕಾಪಾಡಲಿಲ್ಲ ಎಂದು ಈಶ್ವರಪ್ಪ ಅವರನ್ನು ಪ್ರಶ್ನಿಸಿದರು.

ನಾವು ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳುವವರು, ಇವರು ಸಂವಿಧಾನ ವಿರೋಧಿಗಳು, ಸಂವಿಧಾನ ಬದಲಾವಣೆ ಮಾಡಬೇಕು ಎಂದು ಅನಂತಕುಮಾರ್ ಹೆಗಡೆ ಹೇಳಿದಾಗ, ಸಂವಿಧನ ಸುಟ್ಟುಹಾಕಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದಾಗ ಏಕೆ ಈಶ್ವರಪ್ಪ ಖಂಡಿಸಲಿಲ್ಲ, ಈಗ ಎಸ್ಟಿ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ಸಂವಿಧಾನದ ಮೇಲೆ ಗೌರವವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸಾಲ ಮಾಡಿಕೊಂಡು ಆತ್ಮಹತ್ಯೆಮಾಡಿಕೊಳ್ಳುವ ರೈತರು ಹೇಡಿಗಳು ಅಂತೇಳಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಕೃಷಿ ಸಚಿವರು ಬೇಜವಾಬ್ದಾರಿಯಿಂದ ಮಾತನಾಡಬಾರದು. ಒಬ್ಬ ಕೃಷಿ ಸಚಿವರಾಗಿದ್ದುಕೊಂಡು ರೈತರ ಪರವಾಗಿ ಇರದೆ ಈರೀತಿಯ ಹೇಳಿಕೆ ಕೊಡುವುದು ಸರಿಯಲ್ಲ ಎಂದರು.

ನಾಡಿನ ಜನತೆಗೆ ಕನಕದಾಸ ಜಯಂತಿ ಶುಭಾಶಯಗಳು: ಸಿದ್ದರಾಮಯ್ಯ

ನಾಡಿನ ಸಮಸ್ತ ಜನತೆಗೆ ಕನಕದಾಸ ಜಯಂತಿಯ ಶುಭಾಶಯಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇಂದು ಕನಕದಾಸರ ಜಯಂತಿ, ನಾಡಿನ ಜನತೆಗೆ ಕನಕದಾಸರ ಜಯಂತಿಯ ಶುಭಾಶಯಗಳು ಎಂದು ಹೇಳಿದರು.

ಪ್ರಗತಿಪರರು ಬುದ್ಧಿಜೀವಿಗಳ ಜೊತೆ ಇಂದು ಸಭೆ ನಡೆಸಿ ಚರ್ಚಿಸಿದ್ದೇನೆ. ಹಲವು ಮಹತ್ತರ ಸಲಹೆಗಳನ್ನು ನೀಡಿದ್ದಾರೆ. ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಪೂರಕ ಸಲಹೆಗಳನ್ನು ಕೊಟ್ಟಿದ್ದಾರೆ.
- ಸಿದ್ದರಾಮಯ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News