ನಕಲಿ ನೋಟು ಚಲಾವಣೆ ಪ್ರಕರಣ: ಮೂವರಿಗೆ 6 ವರ್ಷ ಜೈಲು ಶಿಕ್ಷೆ

Update: 2020-12-03 17:43 GMT

ಬೆಂಗಳೂರು, ಡಿ.3: ನಕಲಿ ನೋಟು ಚಲಾವಣೆ ಪ್ರಕರಣ ಸಂಬಂಧ ಮೂವರು ಮಂದಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿ ನಗರದ ಎನ್‍ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಎಂ.ಜಿ.ರಾಜು, ಮುಹಮ್ಮದ್ ಸಝ್ಝದ್ ಅಲಿ, ಅಬ್ದುಲ್ ಖಾದಿರ್ ಎಂಬುವರು ಶಿಕ್ಷೆಗೆ ಒಳಗಾದವರು ಎಂದು ತಿಳಿದುಬಂದಿದೆ.

ಎರಡು ವರ್ಷಗಳ ಹಿಂದೆ ಇಲ್ಲಿನ ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿ ನಕಲಿ ನೋಟು ಸಂಗ್ರಹಿಸಿಟ್ಟಿರುವ ಮಾಹಿತಿ ಆಧರಿಸಿ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿದಾಗ 2 ಸಾವಿರ ರೂ. ಮುಖಬೆಲೆಯ 6.80 ಲಕ್ಷ ರೂ. ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಸಝ್ಝದ್, ರಾಜು, ಗಂಗಾಧರ ಮತ್ತು ವನಿತಾ ಎಂಬವರನ್ನು ಬಂಧಿಸಲಾಗಿತ್ತು. 

ನಾಲ್ವರು ಆರೋಪಿಗಳಿಗೆ ಬೆಳಗಾವಿಯ ವಿಜಯ್ ಮತ್ತು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಸಬಿರುದ್ದಿನ್, ಅಬ್ದುಲ್ ಖಾದಿರ್ ಮತ್ತು ಝಹೀರುದ್ದಿನ್ ಎಂಬವರು ನಕಲಿ ನೋಟು ಪೂರೈಕೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು. ತದನಂತರ, ಈ ಮೂವರನ್ನು ಎನ್‍ಐಎ ಬಂಧಿಸಿತ್ತು. ಆದರೆ, ಈಗಲೂ ಝಹೀರುದ್ದಿನ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಇದಾದ ಬಳಿಕ ಬಂಧಿತ ಆರೋಪಿಗಳ ವಿರುದ್ಧ ಎನ್‍ಐಎ, ಆರೋಪಪಟ್ಟಿ ಸಲ್ಲಿಸಿದ ಹಿನ್ನೆಲೆ ಎಲ್ಲ ಏಳು ಮಂದಿ ಆರೋಪಿಗಳ ವಿರುದ್ಧ ಎನ್‍ಐಎ ಹೊರಿಸಲಾಗಿರುವ ಆರೋಪಗಳಿಗೆ ಸಾಕ್ಷ್ಯಾಧಾರಗಳು ಇವೆ. ವಿಚಾರಣೆ ಮುಂದುವರಿಸಬಹುದು ಎಂದು ನ್ಯಾಯಾಲಯ ತಿಳಿಸಿತ್ತು. ಇದರ ನಡುವೆ ಸಝ್ಝದ್ ಅಲಿ, ಎಂ.ಡಿ.ರಾಜು ಮತ್ತು ಅಬ್ದುಲ್ ಖಾದಿರ್ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರಿಗೆ ತಲಾ 20 ಸಾವಿರ ರೂ. ದಂಡ ಮತ್ತು 6 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News