ಯಡಿಯೂರಪ್ಪ ನಾನು ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿ: ಸಿದ್ದರಾಮಯ್ಯ

Update: 2020-12-03 17:55 GMT

ಮೈಸೂರು,ಡಿ.3: ಬಿ.ಎಸ್.ಯಡಿಯೂರಪ್ಪ ನಾನು ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿ. ಸರ್ಕಾರ ರಚನೆಯಾಗಿ ಒಂದೂವರೆ ವರ್ಷ ಕಳೆದರೂ ಇನ್ನೂ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿಲ್ಲ. ಒಂದೇ ಒಂದು ಜನಪರ ಯೋಜನೆ ಈವರೆಗೆ ಜಾರಿಗೆ ಬಂದಿಲ್ಲ. ಒಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತ ಪರಿಸ್ಥಿತಿಯಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಟಿ.ಕೆ.ಲೇಔಟ್‍ನಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಇದೆಯೊ ಇಲ್ಲವೊ ಎಂಬುದೇ ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಡಳಿತ ನಡೆಸುವಲ್ಲಿ ವಿಫಲಗೊಂಡಿದ್ದಾರೆ. ಇಂತಹ ಅಸಮರ್ಥ ಮುಖ್ಯಮಂತ್ರಿಯನ್ನು ನಾನು ಇದುವರೆಗೂ ಕಂಡೇ ಇಲ್ಲ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಕುರುಬ ಸಮುದಾಯವನ್ನು ಎಸ್ಟಿ ಗೆ ಸೇರಿಸಲು ಬಿಜೆಪಿಗೆ ನೈಜ ಕಾಳಜಿಯಿದ್ದರೆ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ನಿರ್ಧರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಸಾಕು. ಅದು ಬಿಟ್ಟು ಈ ವಿಚಾರವನ್ನು ಸಚಿವ ಕೆ.ಎಸ್.ಈಶ್ವರಪ್ಪ ಮೂಲಕ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದರು.

ಎರಡೂ ಕಡೆ ಬಿಜೆಪಿ ಸರ್ಕಾರವೇ ಇರುವಾಗ ಸಮಾವೇಶ, ಪಾದಯಾತ್ರೆಗಳನ್ನು ಮಾಡುವ ಅಗತ್ಯವೇ ಬೀಳುವುದಿಲ್ಲ. ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಈಶ್ವರಪ್ಪ ಅವರು ಒತ್ತಡ ಹೇರಿದರೆ ಸಾಕು ಎಂದರು.

ಸಂವಿಧಾನದ ಆಶಯಗಳಾದ ಸಹಬಾಳ್ವೆ ಹಾಗೂ ಸೋದರತ್ವಗಳನ್ನು ಪಾಲಿಸುವವರು ನಾವು. ಧರ್ಮದ ಹೆಸರಿನಲ್ಲಿ ಅಮಾಯಕರ ರಕ್ತ ಹರಿಸುವವರು ಬಿಜೆಪಿಯವರು. ಯಾರದ್ದು ಐಸಿಸ್ ಉಗ್ರರ ಮನಸ್ಥಿತಿ ಎಂದು ಜನರೇ ನಿರ್ಧರಿಸಬೇಕು ಎಂದು ಬಿಜೆಪಿಗೆ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News