ಬಾಲಕಿ ಕೊಲೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ: ಆರೋಪಿಗೆ ಉಗ್ರ ಶಿಕ್ಷೆಗೆ ಆಗ್ರಹ

Update: 2020-12-03 17:57 GMT

ಮಂಡ್ಯ, ಡಿ.3: ಮದ್ದೂರು ತಾಲೂಕು ಹುರುಗಲುವಾಡಿ ಗ್ರಾಮದಲ್ಲಿ ವಲಸೆ ಕಾರ್ಮಿಕ ಕುಟುಂಬದ ಅಪ್ರಾಪ್ತ ಬಾಲಕಿ ಆರತಿಬಾಯಿ ಕೊಲೆಯನ್ನು ಖಂಡಿಸಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎಂದು ಗುರುವಾರ ಪ್ರತಿಭಟನೆ ನಡೆಸಿದರು.

ಕೃತ್ಯವನ್ನು ಉಗ್ರವಾಗಿ ಖಂಡಿಸಿದ ಪ್ರತಿಭಟನಾಕಾರರು, ಅತ್ಯಾಚಾರಕ್ಕೆ ಯತ್ನಿಸಿ ಬಂಧಿಸಿರುವ ಯುವಕನ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಿ ಗಲ್ಲು ಶಿಕ್ಷೆಯಾಗುವಂತೆ ಕ್ರಮವಹಿಸಬೇಕು. ಬಾಲಕಿಯ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕಬ್ಬು ಕಟಾವು ಮಾಡಲು ದೂರದ ಬಳ್ಳಾರಿಯಿಂದ ಬಂದಿರುವ ಬಡ ವಲಸೆ ಕಾರ್ಮಿಕರಿಗೆ ರಕ್ಷಣೆ ನೀಡಬೇಕು. ಅವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಜಿಲ್ಲಾಡಳಿತ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದ್ಯಂತ ಪ್ರತಿಭಟನೆ ನೀಡುವುದಾಗಿ ಅವರು ಎಚ್ಚರಿಸಿದರು.

ಜಿಲ್ಲೆಯಲ್ಲಿ ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಒಂಟಿಯಾಗಿ ಹೆಣ್ಣುಮಕ್ಕಳು ಓಡಾಡುವುದೇ ಕಷ್ಟವಾಗಿದೆ. ಹೊಲಗದ್ದೆಗಳ ಬಳಿ ಕೆಲಸ ಮಾಡುತ್ತಿರುವ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಆಭರಣಗಳ ಕಳವು ನಡೆಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನಾವು ಜೀವನ ನಿರ್ವಹಣೆಗಾಗಿ ದೂರದಿಂದ ಕುಟುಂಬ ಸಮೇತ ಕಬ್ಬು ಕಡಿಯಲು ಇಲ್ಲಿಗೆ ಬಂದಿದ್ದೇವೆ. ನಮಗೆ ಸೂಕ್ತ ಭದ್ರತೆ, ರಕ್ಷಣೆ ಇಲ್ಲ. ಜೀವಭಯದಲ್ಲೇ ದುಡಿಯಬೇಕಾಗಿದೆ. ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಲಸೆ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು.

ರೈತ ನಾಯಕಿ ಸುನಂದಾ ಜಯರಾಂ, ಲತಾ ಶಂಕರ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ದಸಂಸ ಮುಖಂಡರಾದ ಎಂ.ಬಿ.ಶ್ರೀನಿವಾಸ್, ಹುರುಗಲವಾಡಿ ರಾಮಯ್ಯ, ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News