ಸಂಸದರ ನಿಧಿಗೆ ರಾಜ್ಯದ ಹಣವೇಕೆ?

Update: 2020-12-04 06:17 GMT

ಸಂಸದರಿಗೆ ಪ್ರದೇಶಾಭಿವೃದ್ಧಿ ನಿಧಿಯೆಂದು ಕೇಂದ್ರ ಸರಕಾರ ಪ್ರತಿ ವರ್ಷ ತಲಾ ಮೂರು ಕೋಟಿ ರೂಪಾಯಿ ನೀಡುತ್ತದೆ. ಆದರೆ ಈ ವರ್ಷ ಮತ್ತು ಮುಂದಿನ ವರ್ಷ ಈ ಪ್ರದೇಶಾಭಿವೃದ್ಧಿ ನಿಧಿಯನ್ನು ಕೊಡುವುದಿಲ್ಲ ಎಂದು ಕೈ ಎತ್ತಿದ ಕೇಂದ್ರ ಸರಕಾರ ಈ ಹಣವನ್ನು ಕೋವಿಡ್ ನಿಯಂತ್ರಣ ಕಾರ್ಯಕ್ಕಾಗಿ ಪ್ರಧಾನ ಮಂತ್ರಿಗಳ ಪಿ.ಎಂ. ಕೇರ್ಸ್‌ಗೆ ಬಳಸಿಕೊಳ್ಳುವುದಾಗಿ ತಿಳಿಸಿದೆ. ಪ್ರಧಾನಿ ಮೋದಿಯವರ ಎದುರು ಮಾತಾಡುವ ಧೈರ್ಯವಿಲ್ಲದ ರಾಜ್ಯದ ಸಂಸದರು ಅಲ್ಲಿ ಬಾಯಿ ಮುಚ್ಚಿ ಒಪ್ಪಿಗೆ ಸೂಚಿಸಿ ಬಂದು ಈ ನಿಧಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಗಂಟು ಬಿದ್ದು ಮಂಜೂರು ಮಾಡಿಸಿಕೊಂಡಿದ್ದಾರೆ. ಕರ್ನಾಟಕದಿಂದ ಲೋಕಸಭೆ ಹಾಗೂ ರಾಜ್ಯಸಭೆಗೆ ಚುನಾಯಿತರಾದ ಒಟ್ಟು ನಲವತ್ತು ಸಂಸದರಿಗೆ ಅವರ ಮತ ಕ್ಷೇತ್ರಗಳ ಪ್ರದೇಶಾಭಿವೃದ್ಧಿಗಾಗಿ ಮುಂದಿನ ವರ್ಷದ ಮುಂಗಡ ಪತ್ರದಲ್ಲಿ ಹಣ ಒದಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಮುಖ್ಯ ಮಂತ್ರಿಯವರು ಧಾರಾಳತನದಿಂದ ಈ ಹಣ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರೂ ಇದು ಸರಿಯಾದ ನಿರ್ಧಾರವಲ್ಲ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

 ಮುಂಗಡ ಪತ್ರದಲ್ಲಿ ರಾಜ್ಯದ 40 ಸಂಸದರ ಪ್ರದೇಶಾಭಿವೃದ್ಧಿಗಾಗಿ ತಲಾ ಮೂರು ಕೋಟಿ ರೂಪಾಯಿ ಒದಗಿಸಿದರೆ ಒಟ್ಟು 120 ಕೋಟಿ ರೂಪಾಯಿ ನೀಡಬೇಕಾಗುತ್ತದೆ. ಕೋವಿಡ್-19 ನಂತರ ಕರ್ನಾಟಕ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದೆ.ಸರಕಾರಿ ನೌಕರರ ಸಂಬಳ ಪಾವತಿ ಮಾಡಲು ಪ್ರಯಾಸ ಪಡಬೇಕಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಸದರ ಪ್ರದೇಶಾಭಿವೃದ್ಧಿಗೆ 120 ಕೋಟಿ ರೂಪಾಯಿ ಒದಗಿಸುವುದು ಸಣ್ಣ ಮೊತ್ತವೇನಲ್ಲ. ಆಯವ್ಯಯದ ಇತರ ಯೋಜನೆಗಳಿಗಾಗಿ ವಿನಿಯೋಗಿಸಬೇಕಾದ ಹಣವನ್ನು ಈ ರೀತಿ ಇನ್ಯಾವುದಕ್ಕೋ ಬಳಸುವುದು ಒಳ್ಳೆಯ ಪರಿಪಾಠವಾಗುವುದಿಲ್ಲ. ಇದು ಆಡಳಿತ ನಿರ್ವಹಣೆಯ ಅಶಿಸ್ತಿಗೆ ದಾರಿ ಮಾಡಿಕೊಡುತ್ತದಲ್ಲದೆ ಹಣಕಾಸಿನ ಅವ್ಯವಸ್ಥೆಗೂ ಕಾರಣವಾಗುತ್ತದೆ. ಉಳಿದ ರಾಜ್ಯಗಳ ಪರಿಸ್ಥಿತಿ ಏನೇ ಇರಲಿ ಕರ್ನಾಟಕದ ಸಂಸದರು ಪ್ರದೇಶಾಭಿವೃದ್ಧಿ ನಿಧಿಯನ್ನು ಪಿ. ಎಂ. ಕೇರ್ಸ್‌ಗೆ ವರ್ಗಾವಣೆ ಮಾಡಲು ಒಪ್ಪಿಗೆ ನೀಡಬಾರದಿತ್ತು. ಬೇಕಾದರೆ ಆ ನಿಧಿಯನ್ನು ಕರ್ನಾಟಕದ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಬಹುದಾಗಿತ್ತು.ಆದರೆ ಗಟ್ಟಿಯಾಗಿ ಮಾತಾಡುವ ತಾಕತ್ತನ್ನೇ ಕಳೆದುಕೊಂಡ ನಮ್ಮ ಸಂಸದರ ಮೌನ ಸಮ್ಮತಿಯಿಂದಾಗಿ ಕರ್ನಾಟಕ ಈಗ ಬೆಲೆ ತೆರಬೇಕಾಗಿ ಬಂದಿದೆ.

ಸಂಸದರ ಪ್ರದೇಶಾಭಿವೃದ್ಧಿ ನಿಧಿಯೆಂಬುದು ಮುಂಚೆ ಇರಲಿಲ್ಲ. 1993ರಲ್ಲಿ ಪಿ. ವಿ. ನರಸಿಂಹರಾವ್ ಪ್ರಧಾನ ಮಂತ್ರಿಯಾಗಿದ್ದಾಗ ಇದನ್ನು ಜಾರಿಗೆ ತಂದರು. ತಮ್ಮ ಅಲ್ಪಬಹುಮತದ ಸರಕಾರವನ್ನು ಉಳಿಸಿಕೊಳ್ಳಲು ಸಂಸದರನ್ನು ಒಲೈಸಲು ಸಂಸದರಿಗೆ ವಿಶೇಷ ಅನುದಾನವನ್ನು ಒದಗಿಸುವ ಯೋಜನೆಗೆ ಅವರು ಚಾಲನೆ ನೀಡಿದರು. ದೇಶದ ಯಾವುದೇ ಪ್ರದೇಶದ ಅಭಿವೃದ್ಧಿಗಾಗಿ ಮುಂಗಡ ಪತ್ರದಲ್ಲೇ ಅನುದಾನ ಒದಗಿಸುವುದರಿಂದ ಸಂಸದರಿಗೆ ಇಂತಹ ನಿಧಿಯನ್ನು ಮಂಜೂರು ಮಾಡುವುದು ಬೊಕ್ಕಸಕ್ಕೆ ಭಾರವಲ್ಲದೆ ಬೇರೇನೂ ಅಲ್ಲ. ಅಂತಲೇ ಹಿಂದಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ರದ್ದುಗೊಳಿಸುವಂತೆ ಸರಕಾರಕ್ಕೆ ಸಲಹೆ ನೀಡಿದ್ದರು.

ಸಂಸದರ ಪ್ರದೇಶಾಭಿವೃದ್ಧಿ ನಿಧಿಯೆಂದರೆ ಅವರವರ ಮತಕ್ಷೇತ್ರಗಳಲ್ಲಿ ಕುಡಿಯುವ ನೀರಿನ ಯೋಜನೆಗಾಗಿ, ಸಾರ್ವಜನಿಕ ಆರೋಗ್ಯ ಸೌಕರ್ಯಗಳ ಸಲುವಾಗಿ, ರಸ್ತೆ ನಿರ್ಮಾಣಕ್ಕಾಗಿ ಇದನ್ನು ಬಳಸಿಕೊಳ್ಳಬಹುದಾಗಿದೆ. ಆದರೆ ಅನೇಕ ಸಂಸದರು ದೇವಾಲಯಗಳಿಗೆ, ಪ್ರಾರ್ಥನಾ ಮಂದಿರಗಳಿಗೆ ಈ ಹಣವನ್ನು ಮಂಜೂರು ಮಾಡಿ ತಮ್ಮ ವೋಟ್ ಬ್ಯಾಂಕನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ಈ ವರ್ಷವಂತೂ ಕಾನೂನಿಗೆ ತಿದ್ದುಪಡಿ ತಂದು ಸಂಸದರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂಪಾಯಿಯನ್ನು ಪಿ. ಎಂ. ಕೇರ್ಸ್‌ಗೆ ವರ್ಗಾವಣೆ ಮಾಡುವಂತೆ ಒತ್ತಡ ತರಲಾಗಿದೆ.

ವಾಸ್ತವವಾಗಿ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಸದ್ಬಳಕೆ ಆಗುವುದು ಕಡಿಮೆ.ಇದರಲ್ಲೂ ಭ್ರಷ್ಟಾಚಾರದ ಹಗರಣಗಳು, ಹಣ ದುರ್ವಿನಿಯೋಗದ ಪ್ರಕರಣಗಳು ನಡೆದಿರುವುದು ಸಿಎಜಿ ಲೆಕ್ಕ ಪತ್ರ ತಪಾಸಣೆಯಿಂದ ತಿಳಿದು ಬಂದಿದೆ. ಅಂತಲೇ ಇದನ್ನು ರದ್ದು ಗೊಳಿಸಬೇಕೆಂಬ ಒತ್ತಾಯಗಳು ಬರುತ್ತಿರುತ್ತವೆ. ಬಹುತೇಕ ಸಂಸದರು ಇದನ್ನು ಸದುಪಯೋಗ ಪಡೆದುಕೊಂಡಿಲ್ಲ ಎಂಬ ಟೀಕೆಗಳೂ ಕೇಳಿ ಬರುತ್ತಿರುತ್ತವೆ. ಹಾಗಾಗಿ ಜನತೆಯ ಬೊಕ್ಕಸಕ್ಕೆ ಭಾರವಾದ ಪ್ರದೇಶಾಭಿವೃದ್ಧಿ ನಿಧಿಯನ್ನು ರದ್ದುಗೊಳಿಸುವುದು ಅಗತ್ಯವಾಗಿದೆ.

ಸಂಸದರ ಪ್ರದೇಶಾಭಿವೃದ್ಧಿ ನಿಧಿಯಂತೆ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರಿಗೂ ಅವರ ಮತಕ್ಷೇತ್ರಗಳ ಪ್ರದೇಶಾಭಿವೃದ್ಧಿಗಾಗಿ ವಿಶೇಷ ಅನುದಾನ ಒದಗಿಸಲಾಗುತ್ತದೆ. ಅದು ಕೂಡ ದುರ್ಬಳಕೆಯಾದ ಆರೋಪಗಳು ಕೇಳಿ ಬರುತ್ತಿವೆ. ಕಾರಣ ಇವುಗಳ ಮುಂದುವರಿಕೆಯ ಬಗ್ಗೆ ಮರು ಆಲೋಚನೆ ನಡೆಸುವುದು ಅಗತ್ಯವಾಗಿದೆ. ಕೇಂದ್ರ ಸರಕಾರ ನಿರಾಕರಿಸಿದ ಹಣವನ್ನು ಕರ್ನಾಟಕದ ಬೊಕ್ಕಸದಿಂದ ಕೊಡುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆತುರದ ನಿರ್ಧಾರ ಕೈಗೊಳ್ಳುವ ಬದಲಾಗಿ ಇನ್ನಷ್ಟು ಪರಾಮರ್ಶೆ ನಡೆಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News