ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ: ಸರ್ವ ಪಕ್ಷಗಳಿಂದ ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೆ ನಿರ್ಣಯ

Update: 2020-12-03 18:08 GMT

ಚಿಕ್ಕಮಗಳೂರು, ಡಿ.3: ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವ್ಯಾಪ್ತಿಗೊಳಪಡುವ ಗ್ರಾಮಗಳ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರ ಮಾಡುವುದೂ ಸೇರಿದಂತೆ ನಗರದಲ್ಲಿ ಬೃಹತ್ ಚಳವಳಿ ಹಮ್ಮಿಕೊಳ್ಳಲು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಹಾಗೂ ವಿವಿಧ ಪಕ್ಷ, ಸಂಘ ಸಂಸ್ಥೆಗಳು ಗುರುವಾರ ನಡೆಸಿದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.

ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ರಾಜಕೀಯ ಮುಖಂಡು, ಕಾಫಿಬೆಳೆಗಾರರು, ವಿವಿಧ ಸಂಘಟನೆಗಳ ಮುಖಂಡರು ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಬಿಜೆಪಿ ಪಕ್ಷದ ಮುಖಂಡರೂ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ಈ ನಿರ್ಣಯಕ್ಕೆ ಸಹಮತ ಸೂಚಿಸಿದ್ದಾರೆ. ವರದಿ ವಿರೋಧಿಸಿ ನಗರದಲ್ಲಿ ಹಮ್ಮಿಕೊಳ್ಳುವ ಬೃಹತ್ ಪ್ರತಿಭಟನೆಗೆ ಶೀಘ್ರ ದಿನಾಂಕ ಗೊತ್ತು ಮಾಡುವುದಾಗಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್ಕುಮಾರ್ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಿಂದ ಜಿಲ್ಲೆಯ ಕಾಫಿಬೆಳೆಗಾರರು, ಕೃಷಿಕರ ಬದುಕಿಗೆ ಮಾರಕವಾಗಲಿದೆ. ಡಿ.31ರೊಳಗೆ ವರದಿ ಜಾರಿ ಕುರಿತು ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಹಸಿರು ಪೀಠ ಆದೇಶ ನೀಡಿದ್ದು, ನಮಗೆ ಸಮಯದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ವರದಿ ವಿರೋಧಿ ಹೋರಾಟವನ್ನು ಇನಷ್ಟು ಗಟ್ಟಿಗೊಳಿಸಬೇಕೆಂದು ಆಗ್ರಹಿಸಿದರು.

ಸಿಪಿಐ ಮುಖಂಡ ರೇಣುಕಾರಾಧ್ಯ ಮಾತನಾಡಿ, ಯೋಜನೆ ವ್ಯಾಪ್ತಿಗೊಳಪ ಡುವ ಗ್ರಾಮಗಳ ಗ್ರಾ.ಪಂ.ಚುನಾವಣೆ ಬಹಿಷ್ಕರಿಸು ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ತರಬೇಕು ಎಂದು ತಿಳಿಸಿದರು.

ಬಿಜೆಪಿ ಮುಖಂಡ ಎಚ್.ಡಿ.ತಮ್ಮಯ್ಯ ಮಾತನಾಡಿ, ವರದಿಯಿಂದ ಬೆಳೆಗಾರರು ಮತ್ತು ರೈತರಿಗೆ ಮಾರಕವಾಗಿದ್ದು, ವರದಿ ವ್ಯಾಪ್ತಿಗೊಳಪಡುವ ಗ್ರಾಮಗಳಲ್ಲಿ ವರದಿಯನ್ನು ವಿರೋಧಿಸಿ ಗ್ರಾ.ಪಂ.ಚುನಾವಣೆ ಬಹಿಷ್ಕಾರ ನಡೆಸಿದರೆ ಬಿಜೆಪಿ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಸಭೆಯಲ್ಲಿ ಯೋಜನೆ ಸಂಬಂಧಪಟ್ಟ ಗ್ರಾಮಗಳ ಗ್ರಾ.ಪಂ.ಚುನಾವಣೆ ಬಹಿಷ್ಕರ, ಡಿ.16ರಂದು ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನಾ ಸಭೆ ಹಾಗೂ ಕೊಪ್ಪ ಮತ್ತು ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲೂ ಪ್ರತಿಭಟನಾ ಸಭೆ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜೀತ್ ಕುಮಾರ್, ಬಿಜೆಪಿ ಮುಖಂಡ ವರಸಿದ್ಧಿವೇಣುಗೋಪಾಲ್, ಬಿಎಸ್ಪಿ ಜಿಲ್ಲಾಧ್ಯಕ್ಷ ರಾಧಕೃಷ್ಣ, ರೈತಸಂಘದ ಗುರುಶಾಂತಪ್ಪ, ಕಸ್ತೂರಿ ರಂಗನ್ ವರದಿ ವಿರೋಧಿ ಸಮಿತಿ ಸಂಚಾಲಕ ಎಸ್. ವಿಜಯಕುಮಾರ್, ಕೆಜಿಎಫ್ ಅಧ್ಯಕ್ಷ ಡಾ.ಮೋಹನ್ ಕುಮಾರ್, ಕಾರ್ಯದರ್ಶಿ ಕೆ.ಬಿ.ಕೃಷ್ಣಪ್ಪ, ಉಪಾಧ್ಯಕ್ಷ ವಸಂತೇ ಗೌಡ, ಬಾಲಕೃಷ್ಣ, ಖಾಂಡ್ಯ ಸುಂದರೇಶ್ ಸೇರಿದಂತೆ ಕಾಫಿ ಬೆಳೆಗಾರರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News